ಬೆಂಗಳೂರು: ಇಡ್ಲಿ, ವಡಾ, ದೋಸೆ, ಬಗೆಬಗೆಯ ರೈಸ್ ಖಾದ್ಯಗಳು ಮತ್ತು ಪೊಂಗಲ್ ಸೇರಿದಂತೆ ತರಹೇವಾರಿ ಸಸ್ಯಹಾರಿ ಖಾದ್ಯಗಳಿಗೆ ರಾಮೇಶ್ವರಂ ಕೆಫೆ ಫೇಮಸ್. ಅಂತೆಯೇ ಇಲ್ಲಿನ ರುಚಿ ಸವಿಸಲು ಜನ ಆಗಮಿಸುವುದು ಕಾಮನ್. ಈ ಕೆಫೆಯಲ್ಲಿ ಶುಕ್ರವಾರ ಬಾಂಬ್ ಸ್ಫೋಟ ಸಂಭವಿಸಿದ್ದು, 10 ಜನರು ಗಾಯಗೊಂಡಿದ್ದಾರೆ. ಸದ್ಯ ಸುದ್ದಿಯಲ್ಲಿರುವ ಕೆಫೆ ವೈಶಿಷ್ಟ್ಯವೇನು? ಇದಕ್ಕೆ ರಾಮೇಶ್ವರಂ ಎಂಬ ಹೆಸರಿಟ್ಟಿದ್ಯಾಕೆ? ಎಂಬುದರ ಸಂಕ್ಷೀಪ್ತ ವರದಿ ಇಲ್ಲಿದೆ.
ರಾಮೇಶ್ವರಂ ಎಂದಾಕ್ಷಣ ನೆನಪಾಗುವವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ. ಏಕೆಂದರೆ ರಾಮೇಶ್ವರಂ ಅವರ ಹುಟ್ಟೂರು. ರಾಮೇಶ್ವರಂ ಕೆಫೆಯ ಸಂಸ್ಥಾಪಕರು ಕೂಡ ಅಬ್ದುಲ್ ಕಲಾಂ ಅವರಿಂದ ಪ್ರೇರಣೆಗೊಂಡು ಈ ಕೆಫೆ ಆರಂಭಿಸಿದ್ದರು. ಅಂತೆಯೇ ಇದಕ್ಕೆ ರಾಮೇಶ್ವರಂ ಎಂದು ಹೆಸರಿಟ್ಟದ್ದರು ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಭಾರತದ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಶಾಖೆಗಳನ್ನು ಆರಂಭಿಸುವುದು ರಾಘವೇಂದ್ರ ರಾವ್ ಮತ್ತು ದಿವ್ಯಾ ರಾಘವೇಂದ್ರ ರಾವ್ ಅವರ ಕನಸಾಗಿತ್ತು. ಅಂತೆಯೇ 2021ರಲ್ಲಿ ಬೆಂಗಳೂರಲ್ಲಿ ರಾಮೇಶ್ವರಂ ಕೆಫೆ ಹೆಸರಲ್ಲಿ ಎರಡು ಔಟ್ ಲೆಟ್ ಆರಂಭಿಸಿದ್ದರು.
ರಾಮೇಶ್ವರಂ ಕೆಫೆಯ ಬಗ್ಗೆ ಒಂದಷ್ಟು: - ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ (QSR):ರಾಮೇಶ್ವರಂ ಕೆಫೆ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಆಗಿದ್ದು, ಇದನ್ನು ಸ್ಥಳೀಯವಾಗಿ 'ದರ್ಶಿನಿ' ಅಂತಾರೆ. ಸ್ಥಳ, ಕಡಿಮೆ ದರ ಮತ್ತು ರುಚಿಯಿಂದಲೇ ಇದು ಹೆಸರುವಾಸಿ.
ಇಂಜಿನಿಯರ್ ಮತ್ತು ಸಿಎ ಸಂಸ್ಥಾಪಕರು: ರಾಮೇಶ್ವರಂ ಕೆಫೆಯ ಸಂಸ್ಥಾಪಕರಾದ ರಾಘವೇಂದ್ರ ರಾವ್ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ದಿವ್ಯಾ ರಾಘವೇಂದ್ರ ರಾವ್ ಚಾರ್ಟೆಡ್ ಅಕೌಂಟಂಟ್ ಪದವೀಧರರಾಗಿದ್ದರು. ರಾಘವೇಂದ್ರ ಅವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದರೂ ಹೋಟೆಲ್ ಉದ್ಯಮದಲ್ಲಿ 20ಕ್ಕೂ ಹೆಚ್ಚು ವರ್ಷ ಅನುಭವ ಹೊಂದಿದ್ದಾರೆ.
ಕೆಫೆಯ ಹಿಂದಿನ ಐಡಿಯಾ: ದೇಶಾದ್ಯಂತ ಕಲಬೆರಕೆಯಿಲ್ಲದ ದಕ್ಷಿಣ ಭಾರತೀಯ ಖಾದ್ಯಗಳನ್ನು ಉಣಬಡಿಸುವ ಉದ್ದೇಶದಿಂದ ಸಂಸ್ಥಾಪಕರು ಕೆಫೆಯನ್ನು ಪ್ರಾರಂಭಿಸಿದ್ದರು ಎಂದು ವರದಿಯಾಗಿದೆ.
ಅಬ್ದುಲ್ ಕಲಾಂ ಅವರಿಗೆ ಅರ್ಪಣೆ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಸರಳತೆ, ತಾಳ್ಮೆ ಮತ್ತು ಆದರ್ಶಗಳಿಂದ ಕೆಫೆ ಸಂಸ್ಥಾಪಕರು ಪ್ರೇರಣೆಗೊಂಡಿದ್ದರು. ಅಂತೆಯೇ ಕಲಾಂ ಅವರಿಗೆ ಗೌರವ ಸಲ್ಲಿಸಲು ಅವರ ಹುಟ್ಟೂರು ರಾಮೇಶ್ವರಂ ಹೆಸರನ್ನು ಕೆಫೆಗೆ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.