ಬೆಳಗಾವಿ:ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಸಾಂಬ್ರಾ ವಿಮಾನ ನಿಲ್ದಾಣದ ಇಮೇಲ್‌ಗೆ ಶುಕ್ರವಾರ ಮತ್ತು ಶನಿವಾರದಂದು ಎರಡು ಬಾರಿ ಅಪರಿಚಿತರಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಈ ಬೆನ್ನಲ್ಲೇ ಎಚ್ಚೆತ್ತ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯು ಏರ್ಪೋರ್ಟ್ನಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.
ಶ್ವಾನದಳ, ಬಾಂಬ್ ನಿಷ್ಕ್ರೀಯ ದಳದೊಂದಿಗೆ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ಡಿಸಿಪಿ ರೋಹನ್ ಜಗದೀಶ್, "ಬೆದರಿಕೆ ಕರೆಗೆ ಸಂಬಂಧಿಸಿದಂತೆ ಯಾವುದೇ ಸ್ಫೋಟಕ ವಸ್ತುಗಳು, ರಾಸಾಯನಿಕ ಪದಾರ್ಥಗಳು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿಲ್ಲ. ಇದೊಂದು ಹುಸಿ ಸಂದೇಶವಾಗಿದ್ದು, ಇದರ ಮೂಲ ಪತ್ತೆಗೆ ಜಾಲ ಬೀಸಿದ್ದೇವೆ. ಹಾಗಾಗಿ, ಯಾರೂ ಭಯ ಪಡುವ ಅಗತ್ಯವಿಲ್ಲ" ಎಂದು ತಿಳಿಸಿದ್ದಾರೆ.