ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಮಹಿಳೆಯರ ಬೆತ್ತಲೆ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್​ಮೇಲ್: ಮೂರು ದೂರು ದಾಖಲು - Blackmailing women - BLACKMAILING WOMEN

ಕ್ರೈಂ ಬ್ರ್ಯಾಂಚ್​ನಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ, ಮಹಿಳೆಯರನ್ನು ಬೆತ್ತಲೆಯಾಗಿ ವಿಡಿಯೋ ರೆಕಾರ್ಡ್​ ಮಾಡಿ ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಿರುವ ಆತಂಕಕಾರಿ ಸಂಗತಿ ವರದಿಯಾಗಿದ್ದು, ಈ ರೀತಿ ಕರೆ ಬಂದರೆ ತಕ್ಷಣ ಪೊಲೀಸ್​ ಠಾಣೆಗೆ ತಿಳಿಸುವಂತೆ ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮನವಿ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Sep 8, 2024, 12:59 PM IST

Updated : Sep 8, 2024, 1:35 PM IST

ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ (ETV Bharat)

ಬೆಳಗಾವಿ: ಮುಂಬೈ ಕ್ರೈಂ ಬ್ರ್ಯಾಂಚ್, ಗುಪ್ತಚರ ಇಲಾಖೆಯಿಂದ ಕರೆ ಮಾಡುತ್ತಿದ್ದೇವೆ ಎಂದು ವಿಡಿಯೋ ಕಾಲ್​ ಮಾಡಿ, ಮಹಿಳೆಯರ ನಗ್ನ ದೇಹವನ್ನು ರೆಕಾರ್ಡ್​ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಿರುವ ಪ್ರಕರಣ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಬೆಳಗಾವಿ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್(ಸಿಇಎನ್) ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಡಿಯೋ ಕಾಲ್ ಮಾಡಿ ನೀವು ಕ್ರೈಮ್​ನಲ್ಲಿ ಭಾಗಿಯಾಗಿದ್ದೀರಿ ಎಂದು ಹೆದರಿಸುವ ಖದೀಮರು, ವಿಡಿಯೋ ಕಾಲ್ ಮೂಲಕ ಮಾಹಿತಿ ಕೇಳುತ್ತಾರೆ. ಬಳಿಕ ನಿಮ್ಮ ಇಡೀ ದೇಹವನ್ನು ತಪಾಸಣೆ ಮಾಡಬೇಕು ಎಂದು ಬೆತ್ತಲೆಗೊಳಿಸುತ್ತಾರೆ. ಇದನ್ನೇ ರೆಕಾರ್ಡ್ ಮಾಡಿಕೊಂಡು ಬಳಿಕ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂಬ ಆತಂಕಕಾರಿ ಸಂಗತಿ ಬೆಳಗಾವಿ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಈ ಕುರಿತು ಸಿಇಎನ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, "ಹೊಸ ಮಾದರಿಯಲ್ಲಿ ಸೈಬರ್ ಕ್ರೈಮ್ ಮಾಡುತ್ತಿದ್ದಾರೆ. ಮೇಲ್, ಮೆಸೇಜ್, ಕಾಲ್ಸ್ ಅಥವಾ ವಾಟ್ಸ್ಯಾಪ್ ಮೂಲಕ ಒಂದು ಮೆಸೇಜ್ ಬರುತ್ತದೆ. ಕ್ರೈಂ ಬ್ರ್ಯಾಂಚ್​ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಹೆಸರು ಕ್ರಿಮಿನಲ್ ಕೇಸ್​ನಲ್ಲಿ ಬಂದಿದೆ. ನೀವು ನಮ್ಮ ಹತ್ತಿರ ಬರಬೇಕು. ಯಾಕೆ ನೀವು ಈ ರೀತಿ ಮಾಡಿದ್ದೀರಿ ಎಂದು ರಿಪೋರ್ಟ್ ಕೊಡಬೇಕು ಎಂದು ಸಂತ್ರಸ್ತರಿಗೆ ಭಯ ಹುಟ್ಟಿಸುತ್ತಿದ್ದರು" ಎಂದು ವಿವರಿಸಿದರು.

"ಈಗ ನಾವು ನಿಮ್ಮನ್ನು ವಿಚಾರಣೆ ಮಾಡಬೇಕು. ಕ್ಯಾಮರಾ ಮುಂದೆ ನೀವು ಬರಬೇಕು. ಬೇರೆ ಕಡೆ ನೀವು ಹೋದರೆ ನಿಮ್ಮ ಕ್ರೈಂ ಬಗ್ಗೆ ಫ್ಯಾಮಿಲಿಗೆ ಹೇಳುತ್ತೇವೆ. ಹೇಗೆ ಕ್ರೈಮ್ ಮಾಡಿದ್ದೀರಿ ಅಂತಾ ನಿಮ್ಮ ಬಾಡಿ ವೆರಿಫಿಕೇಶನ್ ಆಗಬೇಕು. ಬಟ್ಟೆ ಬಿಚ್ಚಬೇಕು ಎಂದು ಹೇಳುತ್ತಾರೆ. ಬಳಿಕ ಆ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್​ಮೇಲ್ ಮಾಡುತ್ತಾರೆ. ಈ ರೀತಿ ಸುಳ್ಳು ಹೇಳಿ ನಂಬಿಸಿ ಹಣ ದೋಚುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಮೂರು ಪ್ರಕರಣಗಳು ಸಿಇಎನ್ ಠಾಣೆಯಲ್ಲಿ ದಾಖಲಾಗಿವೆ. ಈ ರೀತಿ ಕರೆಗಳು ಬಂದು ಬ್ಲ್ಯಾಕ್​ಮೇಲ್ ಮಾಡಿದರೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು" ಎಂದು ಪೊಲೀಸ್ ಆಯುಕ್ತರು ಕೋರಿದ್ದಾರೆ.

ಇದನ್ನೂ ಓದಿ:ಹೆಣ್ಮಕ್ಕಳೇ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಆನ್‌ಲೈನ್‌ನಲ್ಲಿ ಈ ರೀತಿ ದೂರು ಸಲ್ಲಿಸಿ - HOW TO FILE COMPLAINT ON NWC

Last Updated : Sep 8, 2024, 1:35 PM IST

ABOUT THE AUTHOR

...view details