ಬೆಂಗಳೂರು:ನಗರದ ಕೋದಂಡರಾಮಪುರದಲ್ಲಿ ಶ್ರೀ ಗಂಗಮ್ಮ ದೇವಿಯ ಜಾತ್ರೆ ಮತ್ತು ಹಸಿ ಕರಗ ಮಹೋತ್ಸವ ಸಮಾರಂಭ ಜೂನ್ 10ರಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ ಎಂದು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ತಿಳಿಸಿದ್ದಾರೆ.
ಶುಕ್ರವಾರ ಉತ್ಸವದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ಕೆ.ಶಿವರಾಂ, ಮುಂದಿನ ಪೀಳಿಗೆ ನಮ್ಮ ಸಂಪ್ರದಾಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಮಹೋತ್ಸವಗಳ ಅವಶ್ಯಕತೆ ಇದೆ. ಆದ್ದರಿಂದ ಗಂಗಮ್ಮ ದೇವಿ ಜಾತ್ರೆ ಮಹೋತ್ಸವ ಮತ್ತು ಹಸಿ ಕರಗ ಮಹೋತ್ಸವ ಕಾರ್ಯಕ್ರಮಗಳು ಜೂನ್ 10, 11 ಮತ್ತು 12ರಂದು ಜರುಗಲಿವೆ ಎಂದರು.
ಶ್ರೀ ಗಂಗಮ್ಮ ದೇವಿ ಆರಾಧನೆಗೆ 96 ವರ್ಷಗಳ ಇತಿಹಾಸವಿದೆ. ಚಂಗವಲ್ಲ ನಾಯಕರ್ ಕುಟುಂಬ ಗಂಗಮ್ಮ ದೇವಿಯ ಪೂಜೆ ಪುನಸ್ಕಾರಗಳ ಜವಾಬ್ದಾರಿ ಹೊತ್ತು ನಡೆಸುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಜನರು ಪ್ಲೇಗ್ ಮಹಾಮಾರಿಗೆ ತುತ್ತಾಗಿದ್ದಾಗ ಸರ್ಕಲ್ ಮಾರಮ್ಮ ದೇವಸ್ಥಾನದ ಸುತ್ತಮುತ್ತಲು ವಾಸಿಸುತ್ತಿದ್ದ ಜನರು ಗಂಗಮ್ಮ ದೇವಿಯ ಪೂಜೆ ಪ್ರಾರಂಭಿಸಿದರು. ನಂತರ ಭಕ್ತಾಧಿಗಳ ಆಶಯದಂತೆ 2004ರಲ್ಲಿ ದೇವಿಗೆ ಶಾಶ್ವತ ದೇವಸ್ಥಾನ ನಿರ್ಮಿಸಲಾಯಿತು ಎಂದು ಮಾಹಿತಿ ನೀಡಿದರು.
10ನೇ ತಾರೀಖು ಸಂಜೆ 5 ಗಂಟೆಗೆ ಕ್ಷೀರಕುಂಭ ಮೆರವಣಿಗೆ ನಡೆಯಲಿದೆ. ಅಂದು ಸಾವಿರಾರು ಮಹಿಳೆಯರು ಕಳಸ ಹೊತ್ತು ಸರ್ಕಲ್ ಮಾರಮ್ಮ ದೇವಸ್ಥಾನದಿಂದ ಹೊರಟು ಕೋದಂಡರಾಮಪುರವನ್ನು ತಲುಪುವರು. 11ನೇ ತಾರೀಖು ಬೆಳಗ್ಗೆ 6ಗಂಟೆಗೆ ಶ್ರೀ ಗಂಗಮ್ಮ ದೇವಿಗೆ ಮಾಂಗಲ್ಯ ಸೂತ್ರಧಾರಣೆ ಮತ್ತು ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12 ಗಂಟೆ ಕುಂಭನೈವೇದ್ಯ ಹಾಗೂ ಮಹಾಮಂಗಳಾರತಿ, ಸಂಜೆ 7 ಗಂಟೆಗೆ ಹಸಿ ಹೂವಿನ ಕರಗ ದೇವಸ್ಥಾನದಿಂದ ಹೊರಟು ಕೋದಂಡರಾಮಪುರ, ವೈಯಾಲಿಕಾವಲ್, ಮಲ್ಲೇಶ್ವರಂ ರಸ್ತೆಗಳ ಮೂಲಕ ಬೆಳಗಿನ ಜಾವ 2 ಗಂಟೆಗೆ ದೇವಸ್ಥಾನ ತಲುಪಲಿದೆ ಎಂದರು.