ಬಳ್ಳಾರಿ:"ಸಂಸದನಾಗುವುದಕ್ಕೂ ಮೊದಲು ನಾಲ್ಕು ಬಾರಿ ಈ ಕ್ಷೇತ್ರದಿಂದ ಶಾಸಕನಾಗಿ ಗೆದ್ದಿದ್ದ ತುಕಾರಾಂ ಎಳ್ಳಷ್ಟು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಈ ಪುಣ್ಯಾತ್ಮ ತನ್ನ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾನೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಂಸದ ತುಕಾರಾಂ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಚೋರನೂರು ಗ್ರಾಮದಲ್ಲಿ ಬಿಜೆಪಿ ಯುವ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. "ನಿಮ್ಮ ಯೋಗ್ಯತೆಗೆ ಸಂಡೂರು ಪಟ್ಟಣದಲ್ಲಿ ಬಸ್ ನಿಲ್ದಾಣವನ್ನೂ ಮಾಡಿಲ್ಲ. ಶಿಕಾರಿಪುರ ಕ್ಷೇತ್ರದ ಅಭಿವೃದ್ಧಿಯನ್ನು ಒಮ್ಮೆ ನೋಡಿ. ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿ ಶ್ರೀರಾಮುಲು ಅವರನ್ನು ಸೋಲಿಸಿದಿರಿ. ಇದಕ್ಕೆ ತಕ್ಕ ಉತ್ತರವನ್ನು ಸಂಡೂರು ಉಪ ಚುನಾವಣೆಯಲ್ಲಿ ಜನ ಕೊಡುತ್ತಾರೆ. ಸಂಡೂರು ಕ್ಷೇತ್ರದ ಗೆಲುವು ಅಭ್ಯರ್ಥಿ ಗೆಲುವಲ್ಲ, ಜನರ ಗೆಲುವು" ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೆಯೇಂದ್ರ (ETV Bharat) "ಬಡವರು, ದಲಿತರು, ರೈತರ ವಿರೋಧಿಯಾಗಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ತಕ್ಕಪಾಠ ಕಲಿಸಬೇಕು. ಒಳಮೀಸಲಾತಿ ನೀಡಬೇಕು ಅಂತಾ ಸುಪ್ರೀಂಕೋರ್ಟ್ ಹೇಳಿದೆ. ಆದರೆ ಇದನ್ನು ಜಾರಿ ಮಾಡದ ಸಿದ್ದರಾಮಯ್ಯ ಮತ್ತೆ ವಿಳಂಬ ಮಾಡ್ತಿದ್ದಾರೆ. ರಾಜು ಕಾಗೆ, ಆರ್.ವಿ. ದೇಶಪಾಂಡೆ ಇವರ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಇವರ ಗ್ಯಾರೆಂಟಿಗಳ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಛೀಮಾರಿ ಹಾಕಿದ್ದಾರೆ" ಎಂದು ಹೇಳಿದರು.
"ಸಿದ್ದರಾಮಯ್ಯನವರೇ ನೀವು ಪ್ರಧಾನಿ ಕಾಲಿನ ಧೂಳಿಗೆ ಸಮ ಅಲ್ಲ. ನೀವು ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತೀರಿ. ಸಿದ್ದರಾಮಯ್ಯ ಅವರಿಗೆ ಭಾಷೆ ಮೇಲೆ ಹಿಡಿತ ಇರಬೇಕು. ತಾವೊಬ್ಬ ಸಿಎಂ ಎನ್ನುವುದನ್ನು ಮರೆಯಬಾರದು. ಯಡಿಯೂರಪ್ಪ ನಾಲ್ಕು ದಶಕಗಳಿಂದ ಹೋರಾಟ ಮಾಡಿದ್ದಾರೆ. ರೈತರ ಕಣ್ಣೀರು ಒರೆಸಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯನವರೇ ನೀವು ಎಷ್ಟು ಹೋರಾಟ ಮಾಡಿದ್ದೀರಿ? ನೀವು ಅದೃಷ್ಟದ ಮುಖ್ಯಮಂತ್ರಿಗಳೇ ಹೊರತು ಹೋರಾಟ ಮಾಡಿ ಸಿಎಂ ಆಗಿಲ್ಲ. ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿದೆಯಾ?" ಎಂದು ಪ್ರಶ್ನಿಸಿದರು.
"ಜಮೀರ್ ಒಬ್ಬ ಪುಡಾರಿ ಮಂತ್ರಿ, ಮೊದಲು ಜಮೀರ್ ಅಹ್ಮದ್ ಅವರನ್ನು ಗಡಿಪಾರು ಮಾಡಬೇಕು. ವಕ್ಫ್ ಬೋರ್ಡ್ ಸಚಿವನಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾನೆ. ಸಿದ್ದರಾಮಯ್ಯನವರ ಕುಮ್ಮಕ್ಕಿನಿಂದ ಜಮೀರ್ ಈ ರೀತಿ ಮಾಡುತ್ತಿದ್ದಾರೆ. ನೀವು ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವುದಿಲ್ಲ. ಉಪ ಚುನಾವಣೆ ಇದೆ ಅಂತಾ ನಾಟಕ ಮಾಡುತ್ತಿದ್ದೀರಿ" ಎಂದರು.
ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, "ಚೀನಾಕ್ಕೆ ಬೀಜಿಂಗ್ ಇದ್ದಂತೆ, ಭಾರತಕ್ಕೆ ಬಳ್ಳಾರಿ ಆಗಬೇಕು ಎನ್ನುವ ಕನಸು ನನ್ನದು. ಪ್ರತಿ ಮನೆಯ ಯುವಕನಿಗೆ ಉದ್ಯೋಗ ಸಿಗಬೇಕು. ಜಿಂದಾಲ್ನಂತಹ ಹತ್ತಾರು ಕಾರ್ಖಾನೆ ಬರಬೇಕು ಎನ್ನುವ ಕನಸಿತ್ತು. ಇದನ್ನು ಸಹಿಸದೇ ಕುತಂತ್ರ ಮಾಡಿ ನನ್ನನ್ನು ಜಿಲ್ಲೆಯಿಂದ 14 ವರ್ಷ ದೂರ ಮಾಡಿದರು. ಜನಾರ್ದನ ರೆಡ್ಡಿ ಮಾತು ಕೊಟ್ಟರೆ, ಪ್ರಾಣ ಕೊಡ್ತೇನೆ ಹೊರತು, ಮಾತು ತಪ್ಪಲ್ಲ. ಮುಂದಿನ ಹತ್ತು ವರ್ಷಗಳಲ್ಲಿ ಈ ಭಾಗದಲ್ಲಿ ಹತ್ತಾರು ಕಾರ್ಖಾನೆಗಳು ಬರುತ್ತವೆ. 10 ವರ್ಷಗಳ ನಂತರ ಯಾರಾದರೂ ಒಬ್ಬರು ಉದ್ಯೋಗ ಇಲ್ಲ ಎಂದು ಹೇಳಿದ್ರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ" ಎಂದು ಹೇಳಿದರು.
"ಸಂಡೂರು ಪೊಲೀಸ್ ಠಾಣೆಯ ಸಿಪಿಐ ಮಹೇಶ್ ಗೌಡ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದರ ಅಡಿಯೋ ಕೂಡ ಹೊರಗಡೆ ಬಂದಿದೆ. ನಾನೇ ಮಹೇಶ್ ಗೌಡರಿಗೆ ಪೋನ್ ಮಾಡಿ, ಇದನ್ನು ಮುಂದುವರಿಸಿದರೆ ನಾವು ಏನು ಎನ್ನುವುದನ್ನು ತೋರಿಸುತ್ತೇವೆ ಎಂದು ಹೇಳಿದ್ದೇನೆ. ಸಿಬಿಐ ಅಧಿಕಾರಿಗಳನ್ನೇ ನೋಡಿದ್ದೇನೆ ಈ ಸಿಪಿಐ ಯಾವ ಲೆಕ್ಕ?" ಎಂದರು.
ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮಾತನಾಡಿ, "ಸಂಡೂರು ಕ್ಷೇತ್ರದಲ್ಲಿ ತುಕಾರಾಂ ನಾಲ್ಕು ಬಾರಿ ಶಾಸಕರಾಗಿಯೂ ಮಾಡದೇ ಇರುವ ಅಭಿವೃದ್ಧಿಯನ್ನು ಈ ಬಾರಿ ಬಿಜೆಪಿ ಮಾಡಲಿದೆ. ಬಸ್ ನಿಲ್ದಾಣ, ಸಮರ್ಪಕವಾದ ಆಸ್ಪತ್ರೆ ಇಲ್ಲ. ಹದಿನೈದು ದಿನಕ್ಕೊಮ್ಮೆ ಕುಡಿಯುವ ನೀರು ಬರ್ತಿದೆ. ಕಳೆದ 20 ವರ್ಷಗಳಿಂದ ನಮ್ಮ ಕಾರ್ಯಕರ್ತರು ತೊಂದರೆ ಅನುಭವಿಸಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಈ ಬಾರಿ ಗೆಲ್ಲಲು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರು ಪಣ ತೊಟ್ಟಿದ್ದಾರೆ. ಜನರು ಬದಲಾವಣೆ ಬಯಸಿದ್ದು, ಈ ಬಾರಿ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ." ಎಂದು ಹೇಳಿದರು.
ಮಾಜಿ ಸಚಿವ ಬಿ ಶ್ರೀರಾಮುಲು ಮಾತನಾಡಿ, "ಸಂಡೂರು ಕ್ಷೇತ್ರದಲ್ಲಿ ಇದುವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ಎಂಪಿ ಚುನಾವಣೆಯಲ್ಲಿ ಚೋರನೂರು ಹೋಬಳಿಯಲ್ಲಿ ನಮಗೆ ಹಿನ್ನಡೆಯಾಗಿದೆ. ಉಪ ಚುನಾವಣೆಯಲ್ಲಿ ಸರ್ಕಾರದ ಪಟಾಲಂ ಕುಳಿತಿದೆ. ಸಂಡೂರು ಕ್ಷೇತ್ರದಲ್ಲಿ ನಿಮ್ಮ ಅಭಿವೃದ್ಧಿ ಏನು ಎಂದು ಜನ ಕೇಳಬೇಕು. ಸಂಡೂರು ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಬೊಮ್ಮಾಯಿ ಸಿಎಂ ಇದ್ದಾಗ 1300 ಕೋಟಿ ಮಂಜೂರು ಮಾಡಿದ್ದರು. ಆದರೆ ಈ ಸರ್ಕಾರ ಇದುವರೆಗೆ ಅನುದಾನ ಬಿಡುಗಡೆ ಮಾಡ್ತಿಲ್ಲ" ಎಂದರು.
ವಾಲ್ಮೀಕಿ ನಿಗಮದ ಹಗರಣದಲ್ಲಿ ತುಕಾರಾಂ ಗೆದ್ದಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ತುಕಾರಾಂಗೆ ಪಾಲು ಹೋಗಿದೆ ಎನ್ನುವ ಬದಲು ಬಾಯಿತಪ್ಪಿದ ಶ್ರೀರಾಮುಲು, "ವಾಲ್ಮೀಕಿ ಹಗರಣದ ಪಾಲು ವಿಜಯೇಂದ್ರಗೆ ಹೋಗಿದೆ" ಎಂದರು. ತಕ್ಷಣ ತಮ್ಮ ಹೇಳಿಕೆ ಸರಿಮಾಡಿಕೊಂಡರು.
ಇದನ್ನೂ ಓದಿ:ಸಿಎಂಗೆ ರೈತರ ಬಗ್ಗೆ ಕಾಳಜಿ ಇದ್ರೆ ವಕ್ಫ್ ಗೆಜೆಟ್ ನೋಟಿಫಿಕೇಷನ್ ರದ್ದುಪಡಿಸಲಿ: ಬೊಮ್ಮಾಯಿ