ಆನೇಕಲ್ (ಬೆಂಗಳೂರು ನಗರ):ಕಳೆದ ಬಾರಿ ಲೋಕಸಭೆಯ 25 ಸ್ಥಾನಗಳನ್ನು ರಾಜ್ಯದಲ್ಲಿ ಗೆದ್ದಿದ್ದೆವು. ಅದರಲ್ಲಿಯೂ ಸುಮಲತಾರಿಗೆ ನಾವೇ ಬೆಂಬಲು ಕೊಟ್ಟಿದ್ದು, ಒಟ್ಟು 26 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದೆವು. ಬಿಜೆಪಿಯಲ್ಲಿ ಒಂದೇ ಒಂದು ದೃಷ್ಟಿ ಬೊಟ್ಟು ಡಿ ಕೆ ಸುರೇಶ್ ಗೆದ್ದಿದ್ದು ಈ ಬಾರಿ ಅದನ್ನು ಬಿಡದಂತೆ 27 ಸ್ಥಾನಗಳನ್ನು ಗೆದ್ದು ನರೇಂದ್ರ ಮೋದಿ ಸರ್ಕಾರವನ್ನು ಗಟ್ಟಿಗೊಳಿಸಲಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ಚೊಂಬು ಪ್ರದರ್ಶನ:ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಡಿ ಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ ಆರ್ ಅಶೋಕ್, ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದರೆ ಬರಗಾಲ ಶನಿ ವಕ್ಕರಿಸಿದ ಹಾಗೆ. ಚೊಂಬುಗಳನ್ನು ಬಿಜೆಪಿಗೆ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಹತ್ತು ಚೊಂಬುಗಳನ್ನು ರಾಜ್ಯದ ಜನತೆಗೆ ನೀಡಿದೆ. ಅದರಲ್ಲಿ ರಾಹುಲ್ ಗಾಂಧಿಗೆ ಒಂದು ಚೊಂಬು ನೀಡಿ ವಿದೇಶದಲ್ಲಿ ಭಿಕ್ಷಾಟನೆಗೆ ಕಳುಹಿಸುತ್ತೇವೆ. ಲೋಕಸಭೆ ಚುನಾವಣೆ ಮುಗಿಯಲಿ ಎಂದು ಹರಿಹಾಯ್ದರು.
ಈ ಸಲ ಡಿ ಕೆ ಸುರೇಶ್ ದೇಶ ವಿಭಜನೆ ಬಗ್ಗೆ ಮಾತನಾಡಿ, ದೇಶಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಡಿ ಕೆ ಬ್ರದರ್ಸ್ ಮುಸ್ಲಿಂರನ್ನು ಭಾಯಿ ಭಾಯಿ ಎನ್ನುತ್ತಾರೆ. ಅವರೇನು ಅವರ ಸಂಬಂಧಿಗಳಾ? ಎಂದು ಪ್ರಶ್ನಿಸಿದ ಅಶೋಕ್, ಕಾಂಗ್ರೆಸ್ ಮುಸ್ಲಿಂ ಸಮುದಾಯ ಮತಗಳಿಗಾಗಿ ಅವರನ್ನು ಓಲೈಸುತ್ತಿದೆ ಎಂದು ಆರೋಪಿಸಿದರು.