ಬೆಂಗಳೂರು:ವಾಲ್ಮೀಕಿ ನಿಗಮದ ಹಗರಣ ಪ್ರಕರಣ ಸಂಬಂಧ ಸಚಿವ ಸ್ಥಾನದಿಂದ ನಾಗೇಂದ್ರ ವಜಾಗೊಳಿಸುವಂತೆ ಒತ್ತಾಯಿಸಿ ಇಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು ಸಲ್ಲಿಕೆ ಮಾಡಲಿದೆ. ಈ ಮೂಲಕ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಒತ್ತಡ ಹಾಕುತ್ತಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಬುಧವಾರ ಮಾತನಾಡಿದ ವೇಳೆ ಈ ಮಾಹಿತಿ ನೀಡಿದರು. ಗುರುವಾರ ವಿಧಾನಸೌಧದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಎಲ್ಲ ಶಾಸಕರು ಒಟ್ಟುಗೂಡಿ ಚರ್ಚೆ ಮಾಡಲಿದ್ದಾರೆ. ಇದೇ ವೇಳೆ, ಮುಂದಿನ ಹೋರಾಟದ ಕುರಿತು ರೂಪುರೇಷೆಯ ನಿರ್ಧಾರ ಮಾಡಲಿದ್ದಾರೆ. ಬಳಿಕ ರಾಜಭವನಕ್ಕೆ ತೆರಳಿ ಸಚಿವ ನಾಗೇಂದ್ರ ಅವರನ್ನು ವಜಾ ಮಾಡಲು ರಾಜ್ಯಪಾಲರಿಗೆ ಒತ್ತಾಯ ಮಾಡಲಿದ್ದೇವೆ. ಇದೊಂದು ಕಿವುಡು ಸರ್ಕಾರ ಎಂದು ರಾಜ್ಯಪಾರಿಗೆ ತಿಳಿಸಲಿದ್ದೇವೆ. ರಾಜ್ಯಪಾಲರು, ಸಂವಿಧಾನಾತ್ಮಕ ಅಧಿಕಾರ ಬಳಸಿ ಈ ಸಚಿವರನ್ನು ವಜಾ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಸಿಬಿಐ ಸ್ವಯಂ ಪ್ರೇರಿತ ದೂರು:ಬ್ಯಾಂಕಿನ ದೂರಿನ ಹಿನ್ನೆಲೆಯಲ್ಲಿ ಸಿಬಿಐ ಸ್ವಯಂಪ್ರೇರಿತವಾಗಿ ಎಫ್‍ಐಆರ್ ದಾಖಲಿಸಿದೆ. ಇದು ಸರ್ಕಾರದ ಕಪಾಳಕ್ಕೆ ಹೊಡೆದ ಹಾಗೆ ಆಗಿದೆ ಎಂದು ವಿಶ್ಲೇಷಿಸಿದರು. ಸಂವೇದನಾಶೀಲ ಸರ್ಕಾರವು ತಾನು ಸಾಚಾ ಇರುವುದಾಗಿ ತೋರಿಸಲು ಸಿಬಿಐಗೆ ತನಿಖೆ ವಹಿಸಬೇಕಿತ್ತು. ಅದರಲ್ಲಿ ನಿರ್ಲಜ್ಜತೆ ತೋರಿದ ಪರಿಣಾಮವಾಗಿ ಇವತ್ತು ಸಿಬಿಐ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತಾಗಿದೆ. ಈ ಸರ್ಕಾರ ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ; ಭ್ರಷ್ಟರ ರಕ್ಷಣೆಗೆ ಯಾವ ರೀತಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತದೆ ಎಂಬುದಕ್ಕೆ ಇದು ಕನ್ನಡಿ ಹಿಡಿದಂತಿದೆ ಎಂದು ಕಿಡಿಕಾರಿದರು.