ಗಂಗಾವತಿ:"ಮೋದಿ ಮೋದಿ ಎಂದು ಹೇಳುವ ವಿದ್ಯಾರ್ಥಿಗಳಿಗೆ ಕಪಾಳಕ್ಕೆ ಹೊಡೆಯಿರಿ" ಎಂಬ ಸಚಿವ ಶಿವರಾಜ್ ತಂಗಡಗಿ ಹೇಳಿಕೆ ಖಂಡಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಕಾರಟಗಿಯಲ್ಲಿ ಪ್ರತಿಭಟನೆ ನಡೆಸಿದರು. ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆಯೂ ನಡೆಯಿತು.
ಬಿಜೆಪಿ ಯುವ ಮೋರ್ಚದ ನೂರಾರು ಕಾರ್ಯಕರ್ತರು ಮಾತನಾಡಿ, ತಂಗಡಗಿ ವಿರುದ್ಧ ನೀತಿ ಸಂಹಿತೆ ಉಲ್ಲಂಘಿಸಿರುವ ದೂರು ದಾಖಲಾಗಬೇಕು. ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು. ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂದು ಘೋಷಣೆ ಕೂಗುತ್ತಾ ಸುಮಾರು ಐದು ನೂರಕ್ಕೂ ಹೆಚ್ಚು ಕಾರ್ಯಕರ್ತರು ಕನಕದಾಸ ವೃತ್ತದಿಂದ ಪಾದಯಾತ್ರೆ ಕೈಗೊಂಡು ತಂಗಡಗಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಮಾಜಿ ಶಾಸಕ ಬಸವರಾಜ ದಢೇಸುಗೂರು ಕಚೇರಿ ಮತ್ತು ಎಂ.ಕೆ.ರೈಸ್ಮಿಲ್ ಮುಂದೆ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರು. ಸಚಿವರ ನಿವಾಸಕ್ಕೆ ತೆರುಳುವ ಮುಖ್ಯರಸ್ತೆ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ನಿಲ್ಲಿಸಿ, ಕಾನೂನು ಉಲ್ಲಂಘಿಸಬಾರದೆಂದು ಸೂಚನೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು- ಬಿ.ವೈ.ರಾಘವೇಂದ್ರ:ಸಚಿವ ತಂಗಡಗಿ ಮಾತನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಆದಷ್ಟು ಬೇಗ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸಬೇಕು. ಇಂತಹ ಹೇಳಿಕೆ ನೀಡುವ ಪ್ರವೃತ್ತಿ ಕಡಿಮೆ ಆಗಬೇಕು ಎಂದರು.
ಒಂದು ತಪ್ಪಿನಿಂದ ಆಕಸ್ಮಿಕವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ. ಇನ್ನೂ ಕೂಡಾ ಮದ, ಅಹಂಕಾರದ ಮಾತು ಆಡುವ ಪ್ರಯತ್ನ ಮಾಡಿದರೆ ಚುನಾವಣೆಯ ನಂತರ ನಿಮ್ಮ ಜಾಗ ಏನೂ ಅಂತ ಗೊತ್ತಾಗುತ್ತದೆ ಎಂದು ಎಚ್ಚರಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವ ಕಂಡ ನಾಯಕರ ಬಗ್ಗೆ ಮಾತನಾಡುವಾಗ ಗೌರವಪೂರ್ವಕವಾಗಿ ನಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಶಿವರಾಜ್ ತಂಗಡಗಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಹೊಡಿ, ಬಡಿ, ಕಪಾಳಕ್ಕೆ ಹೊಡಿ ಅಂತ ನಾಡ ಭಾಷೆಯಲ್ಲಿ ಹೇಳಿರಬಹುದು ಅಷ್ಟೇ. ಅದೇನೂ ದೊಡ್ದದಲ್ಲ ಎಂದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಪೋಸ್ಟರ್ ಹಿಡಿದು ತಂಗಡಗಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಇದನ್ನೂ ಓದಿ:ಜನರ ಒತ್ತಾಯದ ಮೇರೆಗೆ ಮಂಡ್ಯದಿಂದ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ: ಹೆಚ್.ಡಿ ದೇವೇಗೌಡ - HD Devegowda