ಕರ್ನಾಟಕ

karnataka

ETV Bharat / state

ಸರ್ಕಾರ ಸ್ವಾಮೀಜಿಗಳಿಗೆ ಬೆದರಿಕೆ ಹಾಕುವುದು ಸರಿಯಲ್ಲ, ಅವರ ಪರ ನಾವಿದ್ದೇವೆ: ವಿಜಯೇಂದ್ರ - B Y VIJAYENDRA

ಸರ್ಕಾರ ದೇಶದ್ರೋಹಿಗಳು, ದೇಶದ್ರೋಹಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧದ ಕೇಸ್‍ಗಳನ್ನು ಹಿಂಪಡೆಯುತ್ತಿದೆ. ಮತ್ತೊಂದೆಡೆ, ಸ್ವಾಮೀಜಿಗಳಿಗೆ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬಿ.ವೈ. ವಿಜಯೇಂದ್ರ
ಬಿ.ವೈ.ವಿಜಯೇಂದ್ರ (ETV Bharat)

By ETV Bharat Karnataka Team

Published : Dec 2, 2024, 5:55 PM IST

ಬೆಂಗಳೂರು: "ಸ್ವಾಮೀಜಿ ಸಹಜವಾಗಿ ಆಕ್ರೋಶದಿಂದ ಮಾತನಾಡಿದ್ದಾರೆ. ಸರ್ಕಾರವು ದೇಶದ್ರೋಹಿಗಳು, ದೇಶದ್ರೋಹಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ವಿರುದ್ಧದ ಕೇಸ್‍ಗಳನ್ನು ಹಿಂಪಡೆಯುತ್ತಿದೆ. ಮತ್ತೊಂದೆಡೆ ಸ್ವಾಮೀಜಿಗಳಿಗೆ ಬೆದರಿಕೆ ಹಾಕುವುದು ಖಂಡಿತಾ ಸರಿಯಲ್ಲ. ಸ್ವಾಮೀಜಿಗಳ ಪರ ನಾವಿದ್ದೇವೆ ಎಂದು ತಿಳಿಸಿ, ಆಶೀರ್ವಾದ ಪಡೆದಿದ್ದೇವೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ನಗರದ ಮೈಸೂರು ರಸ್ತೆ ಬಳಿ ಇರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಚಂದ್ರಶೇಖರನಾಥ ಮಹಾಸ್ವಾಮೀಜಿ ಅವರನ್ನು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಬಿಜೆಪಿ ನಾಯಕರ ಪ್ರತಿಕ್ರಿಯೆ (ETV Bharat)

"ವಕ್ಫ್ ವಿಚಾರದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಮೊನ್ನೆ ನಡೆದ ಹೋರಾಟದಲ್ಲಿ ಸ್ವಾಮೀಜಿಗಳು ರಾಜ್ಯ ಸರ್ಕಾರದ ನಡವಳಿಕೆ ವಿರುದ್ಧ ಆಕ್ರೋಶಭರಿತರಾಗಿ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಬಗ್ಗೆ ಸ್ವಾಮೀಜಿಗಳು ಕ್ಷಮೆಯನ್ನೂ ಕೇಳಿದ್ದಾರೆ. ಇದರ ನಡುವೆ ರಾಜ್ಯ ಸರ್ಕಾರವು ಸ್ವಾಮೀಜಿಗಳ ವಿರುದ್ಧ ಎಫ್‍ಐಆರ್ ದಾಖಲು ಮಾಡಿ ಅವರಿಗೆ ತನಿಖೆಗೆ ಬರಲು ಒತ್ತಾಯಿಸಿದೆ. ಸ್ವಾಮೀಜಿಗಳು ಆರೋಗ್ಯ ಸರಿ ಇಲ್ಲದಿರುವ ಕುರಿತು ತಿಳಿಸಿದ್ದಲ್ಲದೆ ಅಗತ್ಯ ಉತ್ತರವನ್ನು ಪತ್ರ ಮೂಲಕ ನೀಡಿದ್ದರು. ಆದರೂ ಕೂಡ ಒತ್ತಡ ಹಾಕುತ್ತಿರುವುದು ಸರಿಯಲ್ಲ" ಎಂದು ಹೇಳಿದರು.

ಚಂದ್ರಶೇಖರನಾಥ ಸ್ವಾಮೀಜಿ ಭೇಟಿಯಾದ ಬಿಜೆಪಿ ನಾಯಕರು (ETV Bharat)

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ತನಗೆ ಬಂದಿರುವುದು ನಕಲಿ ನೋಟಿಸ್ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಈ ಕುರಿತು ಪದೇ ಪದೇ ಮಾತನಾಡುವುದಿಲ್ಲ. ನೋಟಿಸ್ ಅಸಲಿಯೇ ನಕಲಿಯೇ ಎಂಬುದು ಬರುವ ದಿನಗಳಲ್ಲಿ ಗೊತ್ತಾಗಲಿದೆ" ಎಂದರು.

ಬೇರೆ ಬೇರೆ ಕಾನೂನು ಇದೆಯೇ?:ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, "ಸ್ವಾಮೀಜಿಗಳು ಕ್ಷಮೆ ಕೇಳಿದರೂ ಕೇಸ್​ ದಾಖಲಿಸಿದ್ದಾರೆ. ದೇಶವಿರೋಧಿ, ಗಲಭೆ ಎಬ್ಬಿಸುವ ಹಾಗೂ ಸೌಹಾರ್ದತೆ ಹಾಳು ಮಾಡುವ ರೀತಿಯಲ್ಲಿ ಹೇಳಿಕೆ ಕೊಟ್ಟ ಇತರರ ಬಗ್ಗೆ ಸರ್ಕಾರ ಯಾಕೆ ಕೇಸ್​ ಹಾಕಿಲ್ಲ?. ಅವರ ಮೇಲೂ ಪ್ರಕರಣ ದಾಖಲಿಸಬೇಕಿತ್ತಲ್ಲವೇ? ಕಾನೂನು ಬೇರೆ ಬೇರೆ ಇದೆಯೇ. ಸ್ವಾಮೀಜಿಯವರಿಗೆ 80 ವರ್ಷವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಹಳ ನೊಂದಿದ್ದಾರೆ. ದೇಶದ್ರೋಹಿಗಳಿಗೂ ಇದು ಅನ್ವಯ ಮಾಡಬೇಕಿತ್ತು" ಎಂದರು.

ಬಿಜೆಪಿ ಸ್ವಾಮೀಜಿಗಳ ಪರ:ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, "ವಕ್ಫ್ ವಿಚಾರದಲ್ಲಿ ರೈತರಿಗೆ ಆಗಿರುವ ಅನ್ಯಾಯ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ಅವತ್ತು ಹಾಗೆ ಮಾತನಾಡಿದ್ದರು. ಅದಕ್ಕೆ ಅವರು ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿದ್ದಾರೆ. ನೋವಾಗಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ ಮೇಲೆ ಇನ್ನೇನಿದೆ. ಬಿಜೆಪಿ ಸ್ವಾಮೀಜಿಗಳ ಪರ ನಿಲ್ಲಲಿದೆ" ಎಂದು ಹೇಳಿದರು.

ಇದನ್ನೂ ಓದಿ:ಸಂವಿಧಾನ ಬದಲಿಸಬೇಕೆಂದು ನಾನು ಹೇಳಿಯೇ ಇಲ್ಲ: ಪೇಜಾವರ ಶ್ರೀ

ABOUT THE AUTHOR

...view details