ಬೆಂಗಳೂರು:ಹರಿಯಾಣದಲ್ಲಿ ಬಿಜೆಪಿ ಸತತ 3ನೇ ಬಾರಿಗೆ ಅಧಿಕಾರ ಹಿಡಿಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಸ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಕಾಂಗ್ರೆಸ್ ಬಹಳಷ್ಟು ಪಿತೂರಿ ನಡೆಸಿತು. ಕಾಂಗ್ರೆಸ್ ಪಕ್ಷ ಏನೇ ತಿಪ್ಪರಲಾಗ ಹಾಕಿದರೂ ಸಹ ಕಾಂಗ್ರೆಸ್ ಗ್ಯಾರಂಟಿಗಿಂತ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಗ್ಯಾರಂಟಿಗೆ ಹರಿಯಾಣದ ಜನರು ಮತ್ತೊಮ್ಮೆ ಮಣೆ ಹಾಕಿದ್ದಾರೆ ಎಂದರು.
ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ನಮ್ಮೆಲ್ಲರಿಗೆ ಸಂತಸ ತಂದಿದೆ. ಪ್ರಜ್ಞಾವಂತ ಜನರು ಮೋದೀಜಿ ಅವರ ನಾಯಕತ್ವಕ್ಕೆ ಇನ್ನಷ್ಟು ಹೆಚ್ಚು ಪುಷ್ಠಿ ಕೊಟ್ಟಿದ್ದಾರೆ. ಜಮ್ಮು - ಕಾಶ್ಮೀರದಲ್ಲೂ ಬಿಜೆಪಿ ದೊಡ್ಡ ಸಾಧನೆ ಮಾಡಿದೆ. ಹರಿಯಾಣದ ಫಲಿತಾಂಶವು ಮುಂಬರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿ.ವೈ.ವಿಜಯೇಂದ್ರ (ETV Bharat) ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರಲು ಗ್ಯಾರಂಟಿಗಳನ್ನು ಬಳಸಿ, ಇದೀಗ ಕಸದ ಬುಟ್ಟಿಗೆ ಹಾಕಿದ್ದೂ ಸೇರಿದಂತೆ ಅನೇಕ ವಿಚಾರಗಳು ಹರಿಯಾಣ ಚುನಾವಣೆಯಲ್ಲಿ ಪ್ರಸ್ತಾಪವಾಗಿದೆ. ಅಹಿಂದ ಹೆಸರು ಹೇಳಿಕೊಂಡು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ಇವತ್ತು ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣದ ಮೂಲಕ ಆ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಈ ವಿಚಾರವನ್ನೂ ಬಿಜೆಪಿ ಅಲ್ಲಿ ಪ್ರಚಾರ ಮಾಡಿತ್ತು. ಕಾಂಗ್ರೆಸ್ಸಿನ ಡೋಂಗಿ ರಾಜಕಾರಣ, ಅವರು ಹೇಳುವುದೊಂದು, ಮಾಡುವುದೊಂದು. ಇವೆಲ್ಲವೂ ಅಲ್ಲಿನ ಚುನಾವಣೆ ವೇಳೆ ಚರ್ಚೆಯಾಗಿದೆ ಎಂದರು.
ಒಳ ಮೀಸಲಾತಿ ವಿಚಾರ: ಇವತ್ತು ರಾಜ್ಯದ ಎಲ್ಲ ಪ್ರಮುಖರ ಜೊತೆ ಸಮಾಲೋಚನಾ ಸಭೆ ಕರೆದಿದ್ದೆವು. ಹಿಂದೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಾಗ ಮೀಸಲಾತಿ ವರ್ಗೀಕರಣ ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದ್ದರು. ಒಳ ಮೀಸಲಾತಿ ವಿಚಾರವಾಗಿ ಸರ್ವರೊಂದಿಗೆ ಚರ್ಚೆ ಮಾಡಿದ್ದು, ಹಿಂದಿನ ಬೊಮ್ಮಾಯಿ ಸರ್ಕಾರ ಕೇಂದ್ರಕ್ಕೆ ಮಾಡಿದ ಶಿಫಾರಸನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಶೀಘ್ರವೇ ಬಿಜೆಪಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬೊಮ್ಮಾಯಿ ಸರ್ಕಾರದ ಶಿಫಾರಸನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಲಿದೆ. ನಾವು ಸಿಎಂ ಭೇಟಿ ಮಾಡುವಾಗ ಯಾರು ಅಲ್ಲಿ ಸಿಎಂ ಆಗಿರ್ತಾರೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ಟಾಂಗ್ ಕೊಟ್ಟರು.
ಇದನ್ನೂ ಓದಿ:ಜಾತಿಗಣತಿ ವರದಿ ಅಂಗೀಕರಿಸಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ