ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ (ETV Bharat) ಬೆಂಗಳೂರು : ಕಾಂಗ್ರೆಸ್ ಸರ್ಕಾರದ ವರ್ಷದ ಸಾಧನೆ ಶೂನ್ಯ. ಎಲ್ಲ ಕ್ಷೇತ್ರದಲ್ಲಿಯೂ ಈ ಸರ್ಕಾರ ವಿಫಲವಾಗಿದೆ. ಗ್ಯಾರಂಟಿಗಳನ್ನೇ ರಾಜ್ಯದ ಅಭಿವೃದ್ಧಿ ಎಂದುಕೊಂಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಲ ಮಾಡಿ ತೆರಿಗೆದಾರರ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ದಲಿತರ ರಕ್ಷಣೆಯಿಲ್ಲ. ಮಹಿಳೆಯರ ರಕ್ಷಣೆಯಲ್ಲಿ ವಿಫಲವಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ನಿಮ್ಮ ಹಣೆಬರಹ ಗೊತ್ತಾಗಲಿದೆ. ಜಾಹೀರಾತಿನ ಮೂಲಕ ಅಭಿವೃದ್ಧಿ ಮಾಡಿದ್ದೇವೆ ಎಂದು ಬೀಗಿದ್ದವರಿಗೆ ಫಲಿತಾಂಶದಂದು ಗೊತ್ತಾಗಲಿದೆ. ಇನ್ನು ಮುಂದಾದರೂ ಬೆನ್ನು ತಟ್ಟಿಕೊಳ್ಳುವುದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಿ. ನಿಮಗೆ ಆಶೀರ್ವಾದ ಮಾಡಿದ್ದನ್ನು ಉಳಿಸಿಕೊಳ್ಳಿ. ಭರವಸೆ ಉಳಿಸಿಕೊಳ್ಳಿ ಎಂದರು.
ಲೋಕಸಭಾ ಚುನಾವಣೆಯಲ್ಲಿ 20 - 25 ಸ್ಥಾನ ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಇಂದು ಹೇಳಿಕೆ ನೀಡಿದ್ದಾರೆ. ಅವರು ಬಿಜೆಪಿ ಫಲಿತಾಂಶದ ಬಗ್ಗೆ ಹೇಳಿದ್ದಾರೆ. ನಮ್ಮ ಗೆಲುವಿನ ಸ್ಥಾನವನ್ನು ಅವರು ಹೇಳಿದ್ದಾರೆ ಅಷ್ಟೆ. ನಿಶ್ಚಿತವಾಗಿ ಅತಿ ಹೆಚ್ಚಿನ ಸ್ಥಾನ ಬಿಜೆಪಿ ಜೆಡಿಎಸ್ ಮೈತ್ರಿ ಗೆಲ್ಲಲಿದೆ. ಹೊಸ ದಾಖಲೆ ರೀತಿ ಫಲಿತಾಂಶ ಬರಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದ ವರ್ಷದ ಸಾಧನೆ ಕುರಿತು ಸಿಎಂ, ಡಿಸಿಎಂ ಮಾತು ಕೇಳಿದರೆ ಗ್ಯಾರಂಟಿಯೇ ಈ ರಾಜ್ಯದ ಅಭಿವೃದ್ಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸರ್ಕಾರ ಬಂದ ನಂತರ ಕೇಂದ್ರದ ಜೊತೆ ಸಂಘರ್ಷದ ಹಾದಿ ಹಿಡಿದಿದ್ದೇ ಇವರ ದೊಡ್ಡ ಸಾಧನೆ. ಕೇಂದ್ರದ ವಿರುದ್ಧ ಟೀಕೆ ಮಾಡುತ್ತಾ, ಗೂಬೆ ಕೂರಿಸುವ ಕೆಲಸ ಮಾಡಿದೆ. ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಕೇಂದ್ರದ ಕಡೆ ಬೆರಳು ತೋರುತ್ತಲೇ ಬಂದಿದೆ ಎಂದರು.
ಸ್ಪಷ್ಟ ಬಹುಮತದ ಕಾಂಗ್ರೆಸ್ ಸರ್ಕಾರದ ಮೇಲೆ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನುಡಿದಂತೆ ನಡೆದ ಸರ್ಕಾರ ಎಂದು ಹೊಗಳು ಭಟರ ಮೂಲಕ ಬೆನ್ನು ತಟ್ಟಿಸಿಕೊಳ್ಳುತ್ತಿರುವುದೇ ಇವರ ಸಾಧನೆ. ಒಂದು ವರ್ಷದ ಸಾಧನೆ ಶೂನ್ಯ. ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಯಾವುದೇ ಹೊಸ ಯೋಜನೆಗಳಿಗೆ ಚಾಲನೆ ಕೊಟ್ಟಿಲ್ಲ. ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಒಂದೇ ಒಂದು ಉದಾಹರಣೆ ಕೂಡ ಇಲ್ಲ ಎಂದು ಟೀಕಿಸಿದರು.
ಬರದ ವಿಚಾರದಲ್ಲಿ ರಾಜ್ಯದ ನಡವಳಿಕೆ ಅಕ್ಷಮ್ಯ ಅಪರಾಧ. ಕೇಂದ್ರದ ವಿರುದ್ಧ ಹೋರಾಟ ಮಾಡಿದ್ದು ಬಿಟ್ಟರೆ ರಾಜ್ಯದಲ್ಲಿ ಜವಾಬ್ದಾರಿಯುತ ಸರ್ಕಾರ ಇದೆ ಎನ್ನುವಂತೆ ನಡೆದುಕೊಳ್ಳಲಿಲ್ಲ. 652 ಕ್ಕೂ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ರಾಜ್ಯ ಸರ್ಕಾರ ರೈತರ ಬಗ್ಗೆ ಅಸಡ್ಡೆ ತೋರಿದೆ. ರಾಜ್ಯ ಸರ್ಕಾರದಿಂದ ರೈತರಿಗೆ ಯಾವ ರೀತಿ ಪರಿಹಾರ ನೀಡಿದೆ ಎಂದು ಪ್ರಶ್ನಿಸಿದರು.
ಎಂಟು ತಿಂಗಳಿಂದ ಪ್ರೋತ್ಸಾಹಧನ ನೀಡಿಲ್ಲ:ಹೈನುಗಾರಿಕೆಗೆ ಪ್ರೋತ್ಸಾಹ ಧನವನ್ನೂ ಎಂಟು ತಿಂಗಳಿನಿಂದ ನೀಡಿಲ್ಲ. ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಈ ಸರ್ಕಾರ ಸಿಲುಕಿದೆ. ಗ್ಯಾರಂಟಿ ಅನುಷ್ಠಾನದ ಆತುರದಲ್ಲಿ ಅಭಿವೃದ್ಧಿ ಮರೆತಿದೆ. ರೈತರ ಕಡೆಗಣಿಸಿದೆ. ಇದೇ ಇವರ ಸಾಧನೆ. ಬೆಲೆ ಏರಿಕೆಯನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಮುದ್ರಾಂಕ ದರ ಹೆಚ್ಚಳ, ಪಹಣಿ ದರ ಹೆಚ್ಚಳ, ವಿದ್ಯುತ್ ದರ ಹೆಚ್ಚಳ, ರೈತರ ಪಂಪ್ ಸೆಟ್ಗಳಿಗೆ ಟಿಸಿ ಅಳವಡಿಕೆಗೆ 25 ಸಾವಿರದಿಂದ 2.5-3 ಲಕ್ಷ ಕಟ್ಟಬೇಕಾಗಿದೆ. ಇಂತಹ ರೈತ ವಿರೋಧಿ ಸರ್ಕಾರವನ್ನು ದೇಶದಲ್ಲಿ ಎಲ್ಲಿಯೂ ನೋಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಕಳೆದ ಏಳೆಂಟು ತಿಂಗಳಿನಲ್ಲಿ ಅಪರಾಧ ಪ್ರಕರಣ ಹೆಚ್ಚಾಗಿದೆ. ಹುಬ್ಬಳ್ಳಿಯ ನೇಹಾ, ಅಂಜಲಿ, ಕೊಡಗಿನಲ್ಲಿ ವಿದ್ಯಾರ್ಥಿನಿ ಮೀನಾ ಕೊಲೆ. ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ, ದಬ್ಬಾಳಿಕೆ ಹೆಚ್ಚಾಗಿದೆ. ಮೂರ್ನಾಲ್ಕು ತಿಂಗಳಿನಲ್ಲಿ 400 ಕ್ಕೂ ಹೆಚ್ಚಿನ ಕೊಲೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಹರಾಜಾಗುತ್ತಿದೆ. ಹಿಂದೆಯೂ ಕೊಲೆಯಾಗಿವೆ. ಆದರೆ, ಕೊಲೆಗಳು ಹೆಚ್ಚಾಗುತ್ತಿರುವಾಗ ಸರ್ಕಾರ ನಿಷ್ಕ್ರಿಯವಾಗಿ ನಡೆದುಕೊಳ್ಳುತ್ತಿದೆ. ಲವ್ ಜಿಹಾದ್ನಂತಹ ವೇಳೆ ಸರ್ಕಾರದ ಹೇಳಿಕೆ ಕೊಲೆಗಡುಕರಿಗೆ ಶಕ್ತಿ ನೀಡಿದಂತಾಗಿದೆ. ನಾಡಿನಲ್ಲಿ ಮಹಿಳೆಯರ ಸುರಕ್ಷತೆಯ ಯಕ್ಷ ಪ್ರಶ್ನೆ ಮೂಡಿದೆ ಎಂದರು.
ಅಭಿವೃದ್ಧಿ ಇಲ್ಲ, ರೈತರ ಪರ ಕಾಳಜಿಯೂ ಇಲ್ಲ. ಬರದಲ್ಲಿ ಸ್ಪಂದಿಸಿಲ್ಲ. ಜನರಿಗೆ ಕೊಲೆಗಡುಕ ಸರ್ಕಾರ ಎನ್ನುವ ವಾತಾವರಣ ಇದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲ. ಹಿಂದೂ ಕಾರ್ಯಕರ್ತರ ಹತ್ಯೆ ಹೆಚ್ಚಾಗುತ್ತಿವೆ. ಲವ್ ಜಿಹಾದ್ ಹೆಚ್ಚುತ್ತಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ. ಬರಗಾಲದಲ್ಲಿಯೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ಸುಪ್ರೀಂ ಕೋರ್ಟ್ ತೀರ್ಪು ಇದೆ ಎಂದು ತಮಿಳುನಾಡಿಗೆ ನೀರು ಹರಿಸಿದೆ ಎಂದರು.
ಹೋರಾಟ ಮಾಡಿದ ರೈತರ ಜೈಲಿಗಟ್ಟುವ ಕೆಲಸ ಮಾಡಿದೆ. 25 ಸಾವಿರ ಕೋಟಿ ಹಣ ಎಸ್ಸಿಎಸ್ಟಿಗೆ ಮೀಸಲಿಟ್ಟಿದ್ದು, ಆ ಹಣ ಬೇರೆಡೆ ವರ್ಗಾವಣೆ ಮಾಡಿ ದಲಿತರಿಗೆ ಅನ್ಯಾಯ ಮಾಡಿದೆ. ರೈತ ಕಿಸಾನ್ ಸಮ್ಮಾನ್ ರಾಜ್ಯದ ಪಾಲು ನಿಲ್ಲಿಸಿದೆ. ಪ್ರಕೃತಿ ವಿಕೋಪ ನಿಧಿ ಅಡಿ 5 ಸಾವಿರ ಕೋಟಿ ಮೀಸಲಿಡುವುದಾಗಿ ತಿಳಿಸಿ ಎಷ್ಟು ಇಟ್ಟಿದೆ ಹೇಳಬೇಕು. ರೇಷ್ಮೆ ಬೆಳಗಾರರಿಗೆ ಎಷ್ಟು ಸಾಲ ನೀಡಿದೆ? ರೈತರಿಗೆ ಏಳು ಗಂಟೆ ವಿದ್ಯುತ್ ಕೊಡಲಾಗುತ್ತಿಲ್ಲ. ಇದು ನಿಷ್ಕ್ರಿಯ ಸರ್ಕಾರ. ಇವರ ಸಾಧನೆ ಶೂನ್ಯ ಎಂದು ಆರೋಪಿಸಿದರು.
ಇದನ್ನೂ ಓದಿ :ಲೋಕಸಭೆ ಚುನಾವಣಾ ಫಲಿತಾಂಶದ ಪರಿಣಾಮದಿಂದಾಗುವ ವಿದ್ಯಮಾನಗಳಿಗೆ ನಾವು ಜವಾಬ್ದಾರಿ ಅಲ್ಲ: ವಿಜಯೇಂದ್ರ - B Y Vijayendra