ಬಿಜೆಪಿ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ:ಬಿ.ವೈ.ರಾಘವೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಫೋಟೋ ಬಿಟ್ಟು, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಫೋಟೋ ಹಾಕಿಕೊಂಡು ಚುನಾವಣೆಗೆ ಪ್ರಚಾರ ನಡೆಸಲಿ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ತಮ್ಮ ಚುನಾವಣಾ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಗೆದ್ದಿದ್ದು ಕೇವಲ 6 ಸೀಟು ಮಾತ್ರ. ಮೋದಿ ಫೋಟೋ ನನ್ನ ಹೃದಯದಲ್ಲಿದೆ. ಅದನ್ನು ವ್ಯತ್ಯಾಸ ಮಾಡಲು ಆಗಲ್ಲ. ನನಗೆ ಮೋದಿ ಫೋಟೋ ಹಾಕಿಕೊಳ್ಳಬೇಡಿ ಎಂದು ಹೇಳಲು ಅವರು ಯಾರು, ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ವಿಶ್ವ ನಾಯಕ. ಅವರು ನನಗೆ ಮಾದರಿ ನಾಯಕರು. ಕೋರ್ಟ್ ಏನು ಹೇಳುತ್ತೆ ನೋಡೋಣ. ಅಪ್ಪ ಮಕ್ಕಳು ಮೂರು ಜನರ ಫೋಟೋ ಹಾಕಿಕೊಂಡು ಹೋಗಲಿ. ಎಷ್ಟು ಮತ ಬರುತ್ತದೆ ನೋಡೋಣ ಎಂದರು.
ಬಿಜೆಪಿ ನಾಯಕರೊಂದಿಗಿನ ಮಾತುಕತೆ ಮುಗಿದ ಅಧ್ಯಾಯ: ಮಾತುಕತೆಗೆ ಕೂರುವುದು ಈಗ ಮುಗಿದ ಅಧ್ಯಾಯ. ನಾನು ಯಾರ ಜತೆಗೂ ಮಾತುಕತೆಗೆ ಕೂರಲ್ಲ. ನಾನು ಚುನಾವಣಾ ರಣರಂಗಕ್ಕೆ ಇಳಿದಿದ್ದೇನೆ. ನನ್ನೊಂದಿಗೆ ಹತ್ತಾರು ಸಾವಿರ ಜನ ರಣರಂಗದಲ್ಲಿಳಿದು ಕೆಲಸ ಮಾಡುತ್ತಿದ್ದಾರೆ. ನಾನು ವಾಪಸ್ ಹೋದರೆ, ನನ್ನ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ನಡುನೀರಿನಲ್ಲಿ ಕೈಬಿಟ್ಟು ಹೋದಂತಾಗುತ್ತದೆ. ಈ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಳೆ ಎಲ್ಲರೂ ನಾಮಪತ್ರ ಸಲ್ಲಿಕೆಗೆ ಬರ್ತಾರೆ. ಸಾಮಾನ್ಯ ಜನರೇ ನನಗೆ ಸ್ಟಾರ್ ಪ್ರಚಾರಕರು. ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಬರಲು ಆಗಲ್ಲ. ಆದರೂ ಗೂಳಿಹಟ್ಟಿ ಶೇಖರ್, ಮಡಿವಾಳ ಸಮಾಜದ ಅಧ್ಯಕ್ಷರಾದ ಎನ್.ವೀರಪ್ಪ ಬಂದಿದ್ದಾರೆ. ನಾನು ಯಾರನ್ನೂ ಕರೆದಿಲ್ಲ ಎಂದು ಹೇಳಿದರು.
ಸಿ.ಟಿ.ರವಿ ಅಸಮಾಧಾನಗೊಂಡಿದ್ದಾರೆ ಎಂದು ನಾನು ಹೇಳಿಲ್ಲ. ರವಿ, ಪ್ರತಾಪ್ ಸಿಂಹ ಅವರಿಗೆ ಸೀಟು ಯಾಕೆ ಕೊಟ್ಟಿಲ್ಲ ಅಂತ ಕೇಳುತ್ತಿದ್ದೇನೆ. ಯತ್ನಾಳರನ್ನು ಪಕ್ಕಕ್ಕೆ ಸರಿಸಿದ್ದು ಯಾಕೆ?. ಅವರು ಅಸಮಾಧಾನ ಎಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ನಾನು ಆಮೇಲೆ ಹೇಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಮೋದಿ ಫೋಟೋ ಬಳಕೆ: ಈಶ್ವರಪ್ಪ ವಿರುದ್ದ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು - BJP Complaint Against Eshwarappa