ಬೆಂಗಳೂರು:ಈ ಬಾರಿಯೂ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿ ಆಯ್ಕೆ ಮಾಡಿದೆ. ರಾಜ್ಯ ಘಟಕದ ವಲಯದಲ್ಲಿ ಚರ್ಚೆಗೆ ಬಾರದೇ ಇದ್ದ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ರಾಜ್ಯ ಬಿಜೆಪಿ ಮಾಜಿ ಉಪಾಧ್ಯಕ್ಷ ನಾರಾಯಣ ಕೃಷ್ಣನಾಸ ಭಾಂಡಗೆ ಅವರಿಗೆ ಟಿಕೆಟ್ ಪ್ರಕಟಿಸಲಾಗಿದೆ.
ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೈಕಮಾಂಡ್ ನಾಯಕರ ಭೇಟಿ ಮಾಡಿ ಚರ್ಚಿಸಿದ ಬೆನ್ನಲ್ಲೇ ಅಭ್ಯರ್ಥಿ ಹೆಸರು ಪ್ರಕಟಗೊಂಡಿದೆ. ಹಾಲಿ ಸದಸ್ಯರಾದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ಬದಲು ನಾರಾಯಣ ಕೃಷ್ಣನಾಸ ಭಾಂಡಗೆ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.
ಭಾಂಡಗೆ ಹಿನ್ನೆಲೆ:17ನೇ ವಯಸ್ಸಿಗೆ ಸಂಘ ಪರಿವಾರದ ನಂಟಿಗೆ ಬಂದ ಭಾಂಡಗೆ 40 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸೇವೆ ಸಲ್ಲಿಸಿದ್ದಾರೆ. ಎಬಿವಿಪಿ ಸಂಸ್ಥಾಪಕ ಸದಸ್ಯರಾಗಿರುವ ಭಾಂಡಗೆ, ವಿಶ್ವ ಹಿಂದೂ ಪರಿಷತ್ನಲ್ಲಿಯೂ ಸೇವೆ ಸಲ್ಲಿಸಿದ್ದು, ರಾಮಶಿಲಾ ಸಂಗ್ರಹ, ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಸಕ್ರಿಯರಾಗಿದ್ದರು.
ಜನ ಸಂಘದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದಾರೆ. ಇಂದಿರಾಗಾಂಧಿ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಪ್ರಕರಣದಲ್ಲಿ ಜೈಲು ವಾಸವನ್ನೂ ಅನುಭವಿಸಿದ್ದಾರೆ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ವಾಸ ಅನುಭವಿಸಿದ್ದಾರೆ. ಲಾಲ್ ಚೌಕದಲ್ಲಿ ತಿರಂಗ ಹಾರಿಸುವ ಅಭಿಯಾನದಲ್ಲಿ ಭಾಗಿಯಾಗಿದ್ದರು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಭಾಗವಹಿಸಿದ್ದರು.
ಬಾಗಲಕೋಟೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ, ಬಿಜಾಪುರ ಯುವ ಮೋರ್ಚಾ ಅಧ್ಯಕ್ಷ, ರಾಜ್ಯ ಬಿಜೆಪಿ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷ ನಿಷ್ಠೆ ಹಾಗೂ ಸೇವೆ ಪರಿಗಣಿಸಿ ರಾಜ್ಯಸಭಾ ಟಿಕೆಟ್ ನೀಡಿ ಹೈಕಮಾಂಡ್ ರಾಜ್ಯಸಭೆಯಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ.
ರಾಜೀವ್ ಚಂದ್ರಶೇಖರ್ ಮತ್ತೊಮ್ಮೆ ಅವಕಾಶ ಕೋರಿದ್ದು, ಹಿರಿಯ ನಾಯಕ ವಿ. ಸೋಮಣ್ಣ ಕೂಡ ನೇರವಾಗಿಯೇ ಟಿಕೆಟ್ ಕೇಳಿದ್ದರು. ಆದರೆ, ಇಬ್ಬರಿಗೂ ಟಿಕೆಟ್ ತಪ್ಪಿದೆ. ರಾಜೀವ್ ಚಂದ್ರಶೇಖರ್ ಅವರಿಗೆ ಬೇರೊಂದು ರಾಜ್ಯದಿಂದ ಅಥವಾ ಯಾವುದಾದರೂ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ. ಸೋಮಣ್ಣ ಅವರಿಗೂ ಲೋಕಸಭಾ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಜೆಪಿಯು ಒಟ್ಟು 14 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ:
1. ನಾರಾಯಣ ಭಾಂಡಗೆ - ಕರ್ನಾಟಕ
2. ಧರ್ಮಶೀಲಾ ಗುಪ್ತಾ - ಬಿಹಾರ
3. ಡಾ.ಭೀಮ್ ಸಿಂಗ್ - ಬಿಹಾರ
4. ರಾಜಾ ದೇವೇಂದ್ರ ಪ್ರತಾಪ ಸಿಂಗ್ - ಛತ್ತೀಸಗಢ