ಬೆಂಗಳೂರು : ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆದಿದೆ. ಅದೇ ರೀತಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗೆ ಅವಕಾಶ ನೀಡದೇ ಫ್ರೀಡಂ ಪಾರ್ಕ್ ನಲ್ಲಿ ಅನುಮತಿ ಪಡೆದು ಪ್ರತಿಭಟನೆ ನಡೆಸುವಂತೆ ಪೊಲೀಸರು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ ರಾಮಮೂರ್ತಿ ಅವರಿಗೆ ಪ್ರತಿಭಟನೆಗೆ ಉದ್ದೇಶಿಸಿರುವ ಸ್ಥಳದಲ್ಲೇ ನೋಟೀಸ್ ನೀಡಿ ಸ್ಥಳದಿಂದ ನಿರ್ಗಮಿಸುವಂತೆ ಸೂಚಿಸಿದರು.
ಇದಕ್ಕೆ ಒಪ್ಪದ ಬಿಜೆಪಿ ನಾಯಕರು ಫ್ರೀಡಂ ಪಾರ್ಕ್ ನಲ್ಲಿ ಬೇರೆ ಪ್ರತಿಭಟನೆ ನಡೆಯುತ್ತಿದೆ, ಜಾಗ ಇಲ್ಲ ಎಂದರು. ಪೊಲೀಸ್ ನೋಟಿಸ್ ಮಧ್ಯೆಯೂ ಮೈಸೂರು ಬ್ಯಾಂಕ್ ವೃತ್ತದಲ್ಲೇ ಪ್ರತಿಭಟನೆಗೆ ಮುಂದಾದರು. ಈ ವೇಳೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಕೆ ರಾಮಮೂರ್ತಿ, ಕೆರಗೋಡಿನಲ್ಲಿ ಹನುಮ ಧ್ವಜಕ್ಕೆ ಅಪಮಾನ ಆಗಿದೆ. ಅದಕ್ಕಾಗಿ ಇಂದು ನಾವು ಹೋರಾಟ ಮಾಡುತ್ತಿದ್ದೇವೆ. ಶಾಸಕ ರವಿ ಗಾಣಿಗ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಅದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳಿಗೆ ರಕ್ಷಣೆ ಇಲ್ಲ. ಹೋರಾಟ ಮಾಡುವವರ ಮೇಲೆ ಎಫ್ಐಆರ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಾಂಗ್ಲಾದೇಶದ ಮುಖ್ಯಮಂತ್ರಿಯಾ? ಪಾಕಿಸ್ತಾನದ ಮುಖ್ಯಮಂತ್ರಿಯಾ? ಎಂದು ಆಕ್ರೋಶ ಹೊರಹಾಕಿದರು.