ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ (ETV Bharat) ಮಂಗಳೂರು:ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಮೇಲೆ ಎಫ್.ಐ.ಆರ್ ದಾಖಲಿಸಿರುವುದನ್ನು ಖಂಡಿಸಿ ಮಂಗಳೂರಿನ ಕಾವೂರು ಜಂಕ್ಷನ್‌ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಸುನಿಲ್ ಕುಮಾರ್, ಸಂಸದ ಬ್ರಿಜೇಶ್ ಚೌಟ, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಸೇರಿದಂತೆ ಮುಖಂಡರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ, ಕೆ.ಎಸ್.ಆರ್.ಪಿ, ಸಿ.ಎ.ಆರ್ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಎಫ್.ಐ.ಆರ್ ದಾಖಲು ಬೆನ್ನಲ್ಲೇ ಶಾಸಕ ಭರತ್ ಶೆಟ್ಟಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೂ ಪ್ರತಿಭಟನೆ ಬಳಿಕ ಭರತ್ ಶೆಟ್ಟಿಯವರು ತಮ್ಮ ಹೇಳಿಕೆ ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದರು. ಈ ವೇಳೆ ಅವರಿಗೆ ಎಲ್ಲಾ ಮುಖಂಡರು ಸೇರಿದಂತೆ, ಕಾರ್ಯಕರ್ತರು ಸಾಥ್ ನೀಡಿದರು.
ಪ್ರತಿಭಟನಾ ಸಭೆ ಮುಗಿಯುತ್ತಿದ್ದಂತೆ ಕಾವೂರು ಪೊಲೀಸ್ ಠಾಣೆಗೆ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಸಾಗಿದರು. ಆದರೆ ಠಾಣೆಗಿಂತ ಅನತಿ ದೂರದಲ್ಲಿಯೇ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಠಾಣೆಗೆ ತೆರಳದಂತೆ ತಡೆಯೊಡ್ಡಿದರು. ಬಿಜೆಪಿ ನಾಯಕರಿಗೆ ಮಾತ್ರ ಪೊಲೀಸ್ ಠಾಣೆ ಬಳಿ ತೆರಳಲು ಅವಕಾಶ ನೀಡಲಾಯಿತು. ಶಾಸಕ ಭರತ್ ಶೆಟ್ಟಿ ಜೊತೆ ಕಾವೂರು ಪೊಲೀಸ್ ಠಾಣೆಗೆ ಆರ್.ಅಶೋಕ್, ಸುನಿಲ್ ಕುಮಾರ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಸಾಥ್ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, "ಈ ಹೋರಾಟ ಪೊಲೀಸರ ವಿರುದ್ಧ ಅಲ್ಲ. ಪೊಲೀಸರ ಹಿಂದೆ ಇರುವ ಕಾಣದ ಕೈಗಳ ವಿರುದ್ಧವಾಗಿದೆ. ಭರತ್ ಶೆಟ್ಟಿ ಮೇಲೆ ಎರಡು ಕೇಸ್ ಆಗಿದೆ. ಶಾಸಕ ವೇದವ್ಯಾಸ ಕಾಮತ್, ಹರೀಶ್ ಪೂಂಜಾ ಮೇಲೂ ಕೇಸ್ ಇದೆ. ಬಿಜೆಪಿ ಶಾಸಕರನ್ನು ಭಯ ಬೀಳಿಸುವ ಕುತಂತ್ರ ಕಾಂಗ್ರೆಸ್ ಮಾಡುತ್ತಿದೆ. ನರೇಂದ್ರ ಮೋದಿ ಹತ್ಯೆ ಮಾಡಬೇಕು ಎಂದವನಿಗೆ ಕಾಂಗ್ರೆಸ್ ಪಾರ್ಲಿಮೆಂಟ್ ಟಿಕೆಟ್ ನೀಡಿದೆ. ಪಾಕಿಸ್ತಾನ ಜಿಂದಾಬಾದ್ ಎಂದವರ ಪರ ಮಂತ್ರಿಗಳು ಬ್ಯಾಟಿಂಗ್ ಮಾಡಿದರು. ಬಾಂಬ್ ಹಾಕಿದವರನ್ನು ಡಿ.ಕೆ.ಶಿ ಬ್ರದರ್ಸ್ ಅಂತಾರೆ. ಕಾಂಗ್ರೆಸ್ ಹಿಂದೂ ವಿರೋಧಿ ತನವನ್ನು ಪದೇ ಪದೇ ತೋರಿಸುತ್ತದೆ. ಕಾಂಗ್ರೆಸ್ ಅವರಿಗೆ ಕೇಡುಗಾಲ ಬಂದಿದೆ. ಎರಡು ಸ್ಕ್ಯಾಮ್ನಲ್ಲಿ ಸಿಕ್ಕಾಕಿಕೊಂಡಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಅಗತ್ಯಬಿದ್ದರೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ: ಸಿಎಂ ಸಿದ್ದರಾಮಯ್ಯ - CM Siddaramaiah