ಬೆಳಗಾವಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅವ್ಯವಹಾರ ಖಂಡಿಸಿ ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ನಗರದ ಸರ್ದಾರ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ನೇತೃತ್ವದಲ್ಲಿ ಪ್ರತಿಭಟನೆ ರ್ಯಾಲಿ ನಡೆಸಲಾಯಿತು. ಈ ವೇಳೆ, ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿ, ದಲಿತರಿಗೆ ಅನ್ಯಾಯ ಮಾಡಿದ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವಂತೆ ಒತ್ತಾಯಿಸಿದರು. ಡಿಸಿ ಕಚೇರಿ ಆವರಣದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಕಚೇರಿಗೆ ಮುತ್ತಿಗೆ ಹಾಕಲು ಬಂದ ಬಿಜೆಪಿ ಕಾರ್ಯಕರ್ತರನ್ನು ಈ ವೇಳೆ ಪೊಲೀಸರು ತಡೆದರು.
ಅನಿಲ್ ಬೆನಕೆ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನವನ್ನು ಚುನಾವಣೆಗೆ ಕಾಂಗ್ರೆಸ್ ಸರ್ಕಾರ ಬಳಸಿದೆ. ಡೆತ್ ನೋಟ್ನಲ್ಲಿ ಮಂತ್ರಿಗಳ ಹೆಸರಿದ್ದರೂ ಸಹ ಎಫ್ಐಆರ್ ಆಗಿಲ್ಲ. ಕೇವಲ ರಾಜೀನಾಮೆ ಪಡೆದು ಬಿಟ್ಟಿದ್ದಾರೆ. ಇದೇ ವಿಚಾರಕ್ಕೆ ಈಗಾಗಲೇ ಒಂದು ವಿಕೆಟ್ ಬಿದ್ದಿದೆ. ಈ ಪ್ರಕರಣದಲ್ಲಿ ಹಲವರ ಕೈವಾಡವಿದ್ದು, ಆ ವಿಕೆಟ್ಗಳು ಕೂಡ ಬೀಳಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ದಲಿತರು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ದೊಡ್ಡ ಭಾಷಣ ಮಾಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರಿಗೆ ದ್ರೋಹ ಬಗೆದಿದ್ದಾರೆ. ಲೂಟಿ ಮಾಡಿದ ಆ 187 ಕೋಟಿ ರೂ. ಹಣವನ್ನು ತೆಲಂಗಾಣದ ಚುನಾವಣೆಯಲ್ಲಿ ಬಳಸಿಕೊಂಡಿದ್ದಾರೆ. ಹಾಗಾಗಿ, ಈ ಸರ್ಕಾರವನ್ನು ಮನೆಗೆ ಕಳುಹಿಸಲು ಬೀದಿಗಿಳಿದು ಬಿಜೆಪಿ ಪ್ರತಿಭಟಿಸುತ್ತಿದೆ ಎಂದರು.