ಬೆಂಗಳೂರು: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ನಾಯಕರು ವಿಧಾನಸೌಧ ಮುತ್ತಿಗೆ ಹಾಕಿ ಹೋರಾಟ ಮಾಡುತ್ತಿದ್ದರೆ ಮತ್ತೊಂದು ಕಡೆ ಬಿಜೆಪಿಯ ರೆಬಲ್ ನಾಯಕರ ಗುಂಪು ಹೋರಾಟಕ್ಕೆ ಗೈರಾಗಿ ಪ್ರತ್ಯೇಕವಾಗಿ ಸಭೆ ಸೇರಿದ್ದು ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ಸಂಘ ಪರಿವಾರದ ನಾಯಕರ ಸಂಧಾನದ ನಡುವೆಯೂ ಅಸಮಾಧಾನ ಶಮನಗೊಂಡಿಲ್ಲ ಎನ್ನುವ ಅನುಮಾನಕ್ಕೆ ಪುಷ್ಟಿ ನೀಡಿದೆ.
ವಿಧಾನಸೌಧದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು, ಸಂಸದರು ಹೋರಾಟದಲ್ಲಿ ತೊಡಗಿದ್ದಾಗ ಸದಾಶಿವನಗರದಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಬಿಜೆಪಿಯ ಕೆಲ ನಾಯಕರು ಸಭೆ ಸೇರಿದ್ದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಜಿ.ಎಂ. ಸಿದ್ದೇಶ್ವರ್, ಚಂದ್ರಪ್ಪ, ಬಿಪಿ ಹರೀಶ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೊನ್ನೆಯಷ್ಟೇ ಈಶ್ವರಪ್ಪ ನಿವಾಸದಲ್ಲಿ ಸಭೆ ನಡೆಸಿದ್ದ ಯತ್ನಾಳ್ ತಂಡ ಇಂದು ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ಸೇರಿ ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಪರೋಕ್ಷ ಸೆಡ್ಡು ಹೊಡೆದಿದೆ. ಪಕ್ಷದ ಅಧಿಕೃತ ಹೋರಾಟಕ್ಕೆ ಗೈರಾಗಿ ಅದೇ ಸಮಯದಲ್ಲಿ ಸಭೆ ನಡೆಸುವ ಮೂಲಕ ರೆಬಲ್ ಚಟುವಟಿಕೆ ನಡೆಸಿ ವಿಜಯೇಂದ್ರ ವಿರುದ್ಧ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, "ನನಗೆ ಬೈಲಹೊಂಗಲದಲ್ಲಿ ಕಾರ್ಯಕ್ರಮ ನಿಗದಿಯಾಗಿದೆ. ಹಾಗಾಗಿ ಅಲ್ಲಿಗೆ ಹೋಗಬೇಕಾದ ಕಾರಣಕ್ಕೆ ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಊಟಕ್ಕೆ ಸೇರಿದ್ದೆವು, ಹಾಗೆಯೇ ಅನೌಪಚಾರಿಕ ಮಾತುಕತೆ ನಡೆಸಿದ್ದೇವೆ. ಆದರೆ ಪಕ್ಷದ ವಿಚಾರಗಳ ಬಗ್ಗೆ ಚರ್ಚಿಸಿಲ್ಲ" ಎಂದು ತಿಳಿಸಿದರು.
"ಮೊನ್ನೆ ಈಶ್ವರಪ್ಪ ನಿವಾಸದಲ್ಲಿ ಸೇರಿದ್ದು ನಿಜ, ಅವರು ಹಿಂದುತ್ವದ ವಿಚಾರದವರು, ನಮ್ಮ ಹಿರಿಯ ನಾಯಕರು. ಸಹಜವಾಗಿ ಚಹಾ ಕುಡಿಯಲು ಹೋಗಿದ್ದೆವು. ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರನ್ನು ಮರಳಿ ವಾಪಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಹೈಕಮಾಂಡ್ ನಿರ್ಣಯ ಮಾಡಿದರೆ ನಾವು ಸ್ವಾಗತ ಮಾಡಲಿದ್ದೇವೆ" ಎಂದರು.
ಮೊನ್ನೆ ಈಶ್ವರಪ್ಪ ನಿವಾಸ, ಇಂದು ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನೋಡಿದರೆ ರೆಬಲ್ಸ್ ಪ್ರತ್ಯೇಕ ಚಟುವಟಿಕೆ ಎನ್ನಿಸುವುದಿಲ್ಲವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, "ನಾವು ಯಾರು ಒಂದು ಕಡೆ ಕೂಡಲೇಬಾರದಾ, ಊಟ ಮಾಡಲೇಬಾರದಾ, ನಾವು ಪಕ್ಷದ ವಿರುದ್ಧ ಕೆಲಸ ಮಾಡುತ್ತಿಲ್ಲ. ಅಶೋಕ್ ನೇತೃತ್ವದಲ್ಲಿ ನಮ್ಮ ತಕರಾರಿಲ್ಲ, ನಮಗೆ ಬೇರೆ ಕೆಲಸವಿತ್ತು. ಹಾಗಾಗಿ ಇಂದಿನ ಹೋರಾಟಕ್ಕೆ ಹೋಗಿರಲಿಲ್ಲ. ನಾವು ಪ್ರತ್ಯೇಕ ಹೋರಾಟ ಮಾಡುವುದಾಗಿ ಹೇಳಿಲ್ಲ. ಸದನದಲ್ಲಿ ಪಕ್ಷ ಬಾವಿಗಿಳಿಯುವ ಸಂದರ್ಭದಲ್ಲಿ ಹೋರಾಟ ಮಾಡಿದ್ದೇವೆ. ನಾವೇನು ಡಿ.ಕೆ. ಶಿವಕುಮಾರ್ ಅವರಿಂದ ಪತ್ರದಲ್ಲಿ ಸಹಿ ಮಾಡಿಸಿಕೊಂಡಿಲ್ಲ. ಯಾರು ಯಾರು ಲೆಟರ್ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೋ ಅವರಿಗೆ ಇದು ಅನ್ವಯವಾಗಲಿದೆ. ಮೊನ್ನೆಯ ಸಭೆ ನಂತರ ನಾವೆಲ್ಲಾ ಪಕ್ಷದೊಳಗೆ ಸಂಘಟಿತವಾಗಿ ಹೋಗುವ ನಿಲುವಿನಲ್ಲಿಯೇ ಇದ್ದೇವೆ" ಎಂದು ಸ್ಪಷ್ಟಪಡಿಸಿದರು.