ಬೆಂಗಳೂರು: ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಿರ್ಣಯ ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಅಕ್ಷಮ್ಯ. ಹೀಗಾಗಿ ಕಾಂಗ್ರೆಸ್ ಧೋರಣೆ ವಿರೋಧಿಸಿ, ರಾಜ್ಯಪಾಲರ ನಿರ್ಣಯ ಬೆಂಬಲಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಿದ್ದೇವೆ. ಇದೇ ರಾಜ್ಯಪಾಲರ ಭಾಷಣವನ್ನು ಸ್ವಾಗತಿಸಿದ್ದೀರಿ. ನಿಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ತಕ್ಷಣ ವಿರೋಧ ಮಾಡ್ತೀರಿ. ರಾಜ್ಯಪಾಲರಿಗೆ ಬಿಜೆಪಿ ಅಣತಿಯಂತೆ ನಡೆದುಕೊಳುತ್ತೀರಿ ಅಂತ ಆರೋಪ ಮಾಡ್ತೀರಿ. ಕೂಡಲೇ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಹೇಳಿದರು.
ಈ ಹಿಂದೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಇದೇ ಸಿದ್ದರಾಮಯ್ಯ ಆಗ ಸ್ವಾಗತಿಸಿದ್ದರು. ಅಂದು ಸ್ವಾಗತ ಮಾಡಿದ್ದ ಸಿದ್ದರಾಮಯ್ಯ ಇವತ್ತೇಕೆ ವಿರೋಧ ಮಾಡುತ್ತಿದ್ದಾರೆ?. ಈಗ ಸಂವಿಧಾನ ಬದಲಾಯ್ತಾ?. ಅದೇ 1988 ಕಾಯಿದೆಯ 17A ಅಡಿಯಲ್ಲಿ ತನಿಖೆಗೆ ಅನುಮತಿ ನೀಡಿದ್ದಾರೆ. ಬೇರೆಯವರು ಮಾಡಿದರೆ ಭ್ರಷ್ಟಾಚಾರ, ಇವರು ಮಾಡಿದರೆ ಭ್ರಷ್ಟಾಚಾರ ಅಲ್ಲ. ಇವರ ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.