ಬೆಂಗಳೂರು: ನಗರದಲ್ಲಿನ ರಸ್ತೆ ಗುಂಡಿ, ಅವ್ಯವಸ್ಥೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್, ಮಾಜಿ ಸಚಿವರಾದ ಭೈರತಿ ಬಸವರಾಜ್, ಗೋಪಾಲಯ್ಯ, ಮುನಿರತ್ನ ಸೇರಿ ಬಿಜೆಪಿ ಬೆಂಗಳೂರು ಶಾಸಕರು ಪಾಲ್ಗೊಂಡರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ನಾವು ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಅಂದ್ರು. ಸಿಂಗಾಪುರ ಥರ ಮಾಡುತ್ತೇವೆ ಅಂದ್ರು. ವರ್ಷ ಆಯಿತು ಹೇಳಿ. ಆದರೆ ಒಂದು ರೂಪಾಯಿನೂ ಬೆಂಗಳೂರಿಗೆ ಹಣ ಕೊಟ್ಟಿಲ್ಲ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕಾಂಗ್ರೆಸ್ ದೆಹಲಿಯಲ್ಲಿ ಹೋರಾಟ ಮಾಡಿದರು. ಈಗ ಬೆಂಗಳೂರು ಜನ ನಮ್ಮ ಬೆಂಗಳೂರು ತೆರಿಗೆ, ನಮ್ಮ ಹಕ್ಕು ಅಂತಾ ಇದ್ದಾರೆ. ಬೆಂಗಳೂರಿಂದ 65% ತೆರಿಗೆ ಬರುತ್ತಿದೆ. ಇನ್ನೂ ಜೋರು ಮಳೆನೂ ಬಂದಿಲ್ಲ. ಆಗಲೇ ರಸ್ತೆಗಳು ಗುಂಡಿಮಯವಾಗಿವೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಇದು ಬ್ರಾಂಡ್ ಬೆಂಗಳೂರಾ? ಎಂದು ಕಿಡಿಕಾರಿದರು.
ನಗರದಲ್ಲಿ ಕಸದ ರಾಶಿ ಬಿದ್ದಿದೆ. ಜನವರಿಯಿಂದ ಕಸ ಎತ್ತುವವರಿಗೆ ಸಂಬಳ ಕೊಟ್ಟಿಲ್ಲ. ಸಿಎಂಗೆ ಮೂರು ನಯಾಪೈಸೆ ಬೆಲೆ ಇಲ್ಲ. ಮಳೆ ನುಗ್ಗಿದ ಸ್ಥಳಕ್ಕೆ ಹೋಗಿ ಒಂದು ಫೋಟೋ ಶೂಟ್ ಮಾಡಿಸಿ ಬಂದರು. ನಾಲ್ಕು ಕಡೆ ಭೇಟಿ ನೀಡಿದ್ದಾರೆ. ಒಂದು ನಯಾ ಪೈಸೆ ಹಣ ಕೊಟ್ಟಿಲ್ಲ. ಮುಖ್ಯಮಂತ್ರಿ ಅವರದ್ದು ಹೋದ ಸಿದ್ದ ಬಂದ ಸಿದ್ದ ಎಂಬಂತಾಗಿದೆ. ಬೆಂಗಳೂರನ್ನು ಲೂಟಿ ಮಾಡಲು ಹೊರಟಿದ್ದಾರೆ. ಟನೆಲ್ ರಸ್ತೆ ಅಂತ ಹೇಳುತ್ತಾರೆ. ಫೆರಿಪರೆಲ್ ರಸ್ತೆಯನ್ನೇ ಮಾಡಲು ಆಗಿಲ್ಲ. ದುಡ್ಡು ಹೊಡೆಯಲು ಟನೆಲ್ ರಸ್ತೆ ಮಾಡುತ್ತಿದ್ದೀರಾ. ದುಡ್ಡು ದೆಹಲಿಗೆ ಕಳುಹಿಸಲು ಟನೆಲ್ ರಸ್ತೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.