ಕರ್ನಾಟಕ

karnataka

ETV Bharat / state

ಕಾಂಗ್ರೆಸ್‌ ಸರ್ಕಾರದಿಂದ 'ಲ್ಯಾಂಡ್‌ ಜಿಹಾದ್‌' ಆರಂಭ, ಸಿಎಂ ಸ್ಪಷ್ಟನೆ ನೀಡಲಿ: ಆರ್.ಅಶೋಕ್‌ - WAQF BOARD NOTICE

ರಾಜ್ಯ ಕಾಂಗ್ರೆಸ್​ ಸರ್ಕಾರ ವಕ್ಫ್ ಆಸ್ತಿ ಹೆಸರಿನಲ್ಲಿ ಲ್ಯಾಂಡ್ ಜಿಹಾದ್ ಮಾಡಲು ಹೊರಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ASHOKA SEEKS CLARIFICATION FROM CM
ಪ್ರತಿಪಕ್ಷದ ನಾಯಕ ಆರ್.ಅಶೋಕ (ETV Bharat)

By ETV Bharat Karnataka Team

Published : Oct 28, 2024, 6:31 PM IST

ಬೆಂಗಳೂರು:ಕಾಂಗ್ರೆಸ್‌ ಸರ್ಕಾರ ಹಾಗೂ ವಕ್ಫ್‌ ಬೋರ್ಡ್‌ನಿಂದ ಲ್ಯಾಂಡ್ ಜಿಹಾದ್ ಆರಂಭವಾಗಿದ್ದು, ಬಡ ರೈತರ ಜಮೀನು ಕಬಳಿಸಲು ಎಲ್ಲ ಬಗೆಯ ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಕೂಡಲೇ ಸ್ಪಷ್ಟೀಕರಣ ನೀಡಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದರು.

ಕಾಂಗ್ರೆಸ್‌ನ ತುಷ್ಟೀಕರಣದಿಂದಾಗಿ ಹಿಂದೂಗಳ ಮೇಲೆ ಹಲ್ಲೆಯಾಗಿದೆ. ಗಣೇಶ ಮೂರ್ತಿ ವಿಸರ್ಜನೆ ಮಾಡಲು ಅವಕಾಶವಿಲ್ಲ, ಜೈ ಶ್ರೀರಾಮ್ ಎನ್ನುವಂತಿಲ್ಲ, ಹಿಂದೂಗಳಿಗೆ ಭದ್ರತೆ ಇಲ್ಲ. ಈಗ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದಲ್ಲಿ ಸುಮಾರು 12 ಸಾವಿರ ಹಾಗೂ ಇಡೀ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 15 ಸಾವಿರ ಎಕರೆ ಭೂಮಿ ಕಬಳಿಸಲು ವಕ್ಫ್ ಬೋರ್ಡ್ ಯೋಜನೆ ರೂಪಿಸಿದೆ. ಇದಕ್ಕಾಗಿ ಕಂದಾಯ ಇಲಾಖೆಯಿಂದ 139 ರೈತರಿಗೆ ತಿಳುವಳಿಕೆ ನೋಟಿಸ್ ನೀಡಲಾಗಿದೆ. ಇದು ಸ್ಪಷ್ಟವಾಗಿ ಸರ್ಕಾರದಿಂದಲೇ ನಡೆಯುತ್ತಿರುವ 'ಲ್ಯಾಂಡ್ ಜಿಹಾದ್' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಜಮೀರ್ ಅಹ್ಮದ್‌, ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದಾರೆ. ಈ ರೀತಿಯಾದರೂ ಭೂಮಿ ಕಸಿದು, ಸಿಎಂ‌ ಆಗುವ ಯೋಜನೆ ರೂಪಿಸಲಾಗಿದೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಮುಡಾ ನಿವೇಶನ ಲೂಟಿ ಮಾಡುತ್ತಾರೆ. ಮತ್ತೊಂದು ಕಡೆ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಸಿಎ ನಿವೇಶನ ಲೂಟಿ ಮಾಡುತ್ತದೆ. ಈಗ ಜಮೀರ್ ಅಹಮದ್ ಕೂಡ ಈ ಪಟ್ಟಿಗೆ ಸೇರಿ ಭೂಮಿ ಕೊಳ್ಳೆ ಹೊಡೆದು ವಕ್ಫ್‌ಗೆ ಸೇರಿಸಲು ತಂತ್ರ ಮಾಡಿದ್ದಾರೆ. ವಕ್ಫ್ ಆಸ್ತಿ ಹೆಸರಿನಲ್ಲಿ ಲ್ಯಾಂಡ್ ಜಿಹಾದ್ ಮಾಡಲು ಹೊರಟಿರುವ ಕಾಂಗ್ರೆಸ್‌ ಸರ್ಕಾರದ ದೌರ್ಜನ್ಯ ವಿರೋಧಿಸಿ ವಿಜಯಪುರದ ರೈತರು ಈ ವರ್ಷ ದೀಪಾವಳಿ ಆಚರಿಸದಿರಲುನಿರ್ಧರಿಸಿದ್ದಾರೆ. ಅನ್ನ ನೀಡುವ ರೈತರ ಭೂಮಿಗೆ ಕನ್ನ ಹಾಕಿ, ರೈತರ ಮನೆ ದೀಪ ಕಸಿದುಕೊಂಡ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತರ ಶಾಪ ತಟ್ಟದೇ ಇರದು ಎಂದು ಅವರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಭೂಮಿ ಕಬಳಿಕೆ ಮಾಡಿಕೊಡುವ ಬದಲು, ಕೇಂದ್ರ ಸರ್ಕಾರದ ಜಂಟಿ ಸಲಹಾ ಸಮಿತಿ ಜೊತೆ ಚರ್ಚೆ ಮಾಡಲಿ. ಅದು ಬಿಟ್ಟು ಸ್ವತಂತ್ರವಾಗಿ ಕ್ರಮ ಕೈಗೊಳ್ಳುವ ಅಧಿಕಾರ ಯಾರಿಗೂ ಇಲ್ಲ. ವಿಜಯಪುರ ಜಿಲ್ಲೆಯಲ್ಲಿ ದೇವಸ್ಥಾನ, ಗುಡಿಗಳು ಕೂಡ ಇದೆ. ಅವೆಲ್ಲಕ್ಕೂ ಎಷ್ಟು ನೋಟಿಸ್ ನೀಡಲಾಗಿದೆ ಎಂದು ಸರ್ಕಾರ ತಿಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಈ ಕುರಿತು ಸ್ಪಷ್ಟನೆ ನೀಡಬೇಕು. ಇದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇತ್ತೇ ಎಂದು ತಿಳಿಸಬೇಕು. ಈಗ ರೈತರು ಕಂಗಾಲಾಗಿದ್ದಾರೆ. ಹಿಂದೂಗಳಿಗೆ ಭಯ ಶುರುವಾಗಿದೆ. ಈ ಸಮಯದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಂಡು ಜನರಿಗೆ ಸೂಕ್ತ ಮಾಹಿತಿ ಹಾಗೂ ಸ್ಪಷ್ಟೀಕರಣ ‌ನೀಡಬೇಕು ಎಂದು ಅಶೋಕ್‌ ಒತ್ತಾಯಿಸಿದರು.

ಇದನ್ನೂ ಓದಿ:

ಗೆಜೆಟ್ ದೋಷದಿಂದಾಗಿ ಹೊನವಾಡ ಗ್ರಾಮದ ರೈತರ ಜಮೀನು ವಿಷಯದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್

ವಕ್ಫ್ ಬೋರ್ಡ್ ನೋಟಿಸ್; ಸರ್ಕಾರಕ್ಕೆ 15 ದಿನ ಬಿಜೆಪಿ ಗಡುವು, ರೈತರ ಅಹವಾಲು ಆಲಿಸಲು ತಂಡ ರಚನೆ

ಬೇರೆಯವರ ಒಂದಿಂಚು ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಲ್ಲ: ಸಚಿವ ಜಮೀರ್ ಅಹ್ಮದ್​

ABOUT THE AUTHOR

...view details