ವಾಕ್ ಸ್ವಾತಂತ್ರ್ಯ ದುರ್ಬಳಕೆಯಲ್ಲಿ ಬಿಜೆಪಿ ನಂಬರ್ ಒನ್: ಸಂತೋಷ್ ಲಾಡ್ ಕಿಡಿ ಧಾರವಾಡ:''ಬಿಜೆಪಿ ನಾಯಕರು ಎಲ್ಲಿ ಬೇಕಾದಲ್ಲಿ ಏನು ಬೇಕಾದರು ಮಾತನಾಡುತ್ತಿದ್ದಾರೆ. ವಾಕ್ ಸ್ವಾತಂತ್ರ್ಯ ಕೊಟ್ಟಿದ್ದು ಅಂಬೇಡ್ಕರ್. ಆದರೆ, ಈ ವಾಕ್ ಸ್ವಾತಂತ್ರ್ಯ ದುರ್ಬಳಕೆಯಲ್ಲಿ ಬಿಜೆಪಿ ನಂಬರ್ ಒನ್. ಜನ ಇವರ ಮಾತು ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲದಕ್ಕೂ ಒಂದು ಕಾಲ ಮೀತಿ ಇರುತ್ತದೆ. ಏನೋ ಒಂದು ಗಾಳಿ ಇದೆ. ಆ ಗಾಳಿಯಲ್ಲಿ ಗೆಲ್ಲುತ್ತ ಹೊರಟಿದ್ದಾರೆ. ಪ್ರಗತಿ ಬಗ್ಗೆ ಮಾತನಾಡಿ ಅಂದ್ರೆ ಉಡಾಫೆ ಮಾತುಗಳನ್ನು ಹೇಳುತ್ತಾರೆ'' ಎಂದು ಸಚಿವ ಸಂತೋಷ್ ಲಾಡ್ ಕಿಡಿಕಾರಿದರು.
ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸದ ಅನಂತಕುಮಾರ್ ಹೆಗಡೆಗೆ ಕೋರ್ಟ್ ಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಸಂಸತ್ನಲ್ಲಿಯೂ ಸಹ ಕೆಲ ಪದ ಬಳಸುತ್ತಾರೆ. ಬಡವ ಅಂತಾ ಅನ್ನೋ ಪದ ಬಳಸುತ್ತಾರೆ. ಇದರ ಬಗ್ಗೆಯೂ ಗಮನ ಹರಿಸಬೇಕಿದೆ'' ಎಂದು ಸಚಿವ ಸಂತೋಷ್ ಲಾಡ್ ಒತ್ತಾಯಿಸಿದರು.
ರಾಜ್ಯದಲ್ಲಿ 16-18 ಎಂಪಿ ಸ್ಥಾನ ಗೆಲ್ಲುತ್ತೇವೆ:ಬಿಜೆಪಿ 400 ಎಂಪಿ ಸ್ಥಾನ ಗೆಲ್ಲಲಿದೆ ಎನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಅವರೆಲ್ಲ ಒದ್ದಾಡಿ 370 ಗೆಲ್ಲಲ್ಲು ಆಗಿಲ್ಲ. ಈಗ 300 ಗೆಲ್ಲೋಕೆ ಆಗುವುದಿಲ್ಲ. ಆದರೆ, ಕಾಟಾಚಾರಕ್ಕೆ ಹೇಳುತ್ತಾರೆ. ಅವರು ಹೇಳಿದ ನಂಬರ್‌ನ್ನೇ ಮಾಧ್ಯಮದವರು ತೋರಿಸುತ್ತಾರೆ. ಹೀಗಾಗಿ ಅವರ ಪಿಕ್ಚರ್ ನಡೆಯುತ್ತದೆ. ನಾವಂತೂ ಅಷ್ಟು ಇಷ್ಟು ಅಂತಾ ಹೇಳುವುದಿಲ್ಲ. ರಾಜ್ಯದಲ್ಲಿ ನಾವು 16 ರಿಂದ 18 ಎಂಪಿ ಸ್ಥಾನಗಳನ್ನು ಗೆಲ್ಲುತ್ತೇವೆ. 20 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ''ಮೊದಲ ಪಟ್ಟಿಯಲ್ಲೇ ಎಲ್ಲವೂ ಬರಬಹುದು. ಧಾರವಾಡ ಸಹ ಕ್ಲಿಯರ್ ಆಗಬಹುದು. ಸಚಿವರಿಗೆ ಟಿಕೆಟ್ ಕೊಡುವ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು'' ಎಂದರು.
ನವಲಗುಂದದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ''ಫೆ. 24ರಂದು ಸಿಎಂ ಸಿದ್ದರಾಮಯ್ಯ ನವಲಗುಂದ ಕ್ಷೇತ್ರಕ್ಕೆ ಬರುತ್ತಾರೆ. ಆಶ್ರಯ ಬಡಾವಣೆ ನಿರ್ಮಾಣ ಮಾಡಿದ್ದೇವೆ. ಹಕ್ಕುಪತ್ರ ವಿತರಿಸಿ ಜನರಿಗೆ ಸಮರ್ಪಿಸಲಿದ್ದಾರೆ. 2,100 ಕುಟುಂಬಕ್ಕೆ ಹಕ್ಕುಪತ್ರ ನೀಡುತ್ತೇವೆ. ಕ್ಷೇತ್ರದಲ್ಲಿ 34 ಚಕ್ಕಡಿ ರಸ್ತೆಗಳನ್ನು ಮಾಡಿದ್ದೇವೆ. ರೈತರ ಸಹಕಾರದಿಂದ 169 ಕಿಮೀ ಪೂರ್ಣವಾಗಿದೆ. 12ಕ್ಕೂ ಹೆಚ್ಚು ಸಚಿವರು ಸಿಎಂ ಜೊತೆ ಬರಲಿದ್ದಾರೆ. ಆ ಪ್ರಯುಕ್ತ ನವಲಗುಂದದಲ್ಲಿ ಕಾರ್ಯಕ್ರಮ ನಡೆಯಲಿದೆ. 50 ಸರ್ಕಾರಿ ಬಸ್‌ಗಳನ್ನೂ ಉದ್ಘಾಟಿಸಲಿದ್ದಾರೆ. ಸಿಎಂ, ಡಿಸಿಎಂ ಸಹ ಬರಲಿರುತ್ತಿರುವುದು ನಮ್ಮ ಕ್ಷೇತ್ರಕ್ಕೆ ಖುಷಿ ಸಂಗತಿ'' ಎಂದರು.
ಫೆ.24 ರಂದು ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಎನ್.ಎಚ್. ಕೋನರೆಡ್ಡಿ ಸ್ಥಳ ಪರಿಶೀಲನೆ ಮಾಡಿದರು. ಫೆ.24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು 2000 ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ ನಗರಕ್ಕೆ ನಮ್ಮ ಮೆಟ್ರೋ ತರುವುದಾಗಿ ಶಾಸಕ ಪ್ರದೀಪ್ ಈಶ್ವರ್ ಭರವಸೆ