ಹುಬ್ಬಳ್ಳಿ:"ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಒಳಬೇಗುದಿ ಇದೆ. ಡಿಸಿಎಂ, ಸಿಎಂ ಆಗಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಸಿದ್ದರಾಮಯ್ಯ ಸಿಎಂ ಕುರ್ಚಿಗೆ ಫೆವಿಕಾಲ್ ಹಾಕಿಕೊಂಡು ಕುಳಿತಿದ್ದಾರೆ. ಇತ್ತ ಡಿಸಿಎಂ ಡಿಕೆಶಿ ಫೆವಿಕಾಲ್ ಕಿತ್ತು ತೆಗೆಯಲು ಪ್ರಯತ್ನಿಸುತ್ತಿದ್ದಾರೆ" ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಎಲ್ಲವನ್ನೂ ಇವರಿಬ್ಬರೇ ಮಾಡಿದರೆ, ನಮ್ಮದೇನು ಪಾತ್ರ ಎನ್ನುವ ಆತಂಕ ಗೃಹ ಸಚಿವರಿಗಿದೆ. ಬರುವ ದಿನಗಳಲ್ಲಿ ಇದು ದೊಡ್ಡ ಸ್ವರೂಪ ಪಡೆಯುತ್ತದೆ. ಈ ಸರ್ಕಾರ ಅವಧಿ ಪೂರ್ಣಗೊಳಿಸುವುದಿಲ್ಲ. ಯಾವ ಪುರುಷಾರ್ಥಕ್ಕೆ ಹಾಸನದಲ್ಲಿ ಸಮಾವೇಶ ಮಾಡಿದರು?. ಜನಕಲ್ಯಾಣ ಮಾಡಲಿ ಅಂತ ಜನ ಅಧಿಕಾರ ಕೊಟ್ಟರೆ, ಕಾಂಗ್ರೆಸ್ ಜನಕಲ್ಯಾಣ ಮರೆತು ಸಮಾವೇಶದಲ್ಲಿ ಮುಳುಗಿದ್ದಾರೆ. ರಾಜ್ಯದ ಹಣಕಾಸನ್ನು ಇವರು ದಿವಾಳಿ ಮಾಡಿದ್ದಾರೆ. ರಾಜ್ಯದಲ್ಲಿ ಇರುವುದು ಜೀರೋ ಸರ್ಕಾರ. ಅಭಿವೃದ್ಧಿಯಲ್ಲಿ, ಸಾಮಾಜಿಕ ನ್ಯಾಯಾಲಯದಲ್ಲಿ, ಕಾನೂನು ವ್ಯವಸ್ಥೆ ಕಾಪಾಡುವಲ್ಲಿ, ಎಲ್ಲದರಲ್ಲೂ ಜೀರೋ. ಹಣಕಾಸಿನ ದಿವಾಳಿ ಮಾಡಿ, ಅಭಿವೃದ್ಧಿ ಶೂನ್ಯವಾಗಿದೆ" ಎಂದರು.
"ಕಾಂಗ್ರೆಸ್ ಹೆಜ್ಜೆ ಹೆಜ್ಜೆಗೂ ಹಗರಣಗಳನ್ನು ಮಾಡುತ್ತಿದೆ. ಕೋರ್ಟ್ನಲ್ಲಿ ನಡೆಯುತ್ತಿರುವ ಕೇಸ್ ಮೇಲೆ ಪ್ರಭಾವ ಬೀರಲು ಸರ್ಕಾರಿ ದುಡ್ಡಿನಲ್ಲಿ ಸಮಾವೇಶ ಆಯೋಜನೆ ಮಾಡಲಾಗುತ್ತಿದೆ. ಅದೇ ದುಡ್ಡನ್ನು ಅಭಿವೃದ್ಧಿಗೆ ಬಳಕೆ ಮಾಡಬಹುದಿತ್ತು. ನಿಮಗೆ ಆನೆ ಬಲ ತುಂಬಿಕೊಳ್ಳುವುದಲ್ಲ. ಜನರಿಗೆ ಆನೆ ಬಲ ತುಂಬುವ ಕೆಲಸ ಆಗಬೇಕಿದೆ. ಅಸ್ಥಿರತೆಯಲ್ಲಿ ಸಿದ್ದರಾಮಯ್ಯ ಕಾಲ ದೂಡುತ್ತಿದ್ದಾರೆ" ಎಂದು ದೂರಿದರು.
ವಕ್ಫ್ ವಿರುದ್ಧ ಬಿಜೆಪಿ ಹೋರಾಟ ನಾಟಕ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಸಿಎಂ ದೊಡ್ಡಾಟದ ಪ್ರಮುಖ ಪಾತ್ರಧಾರಿ. ವಿರೋಧ ಪಕ್ಷವಾಗಿ ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವುದು ನಮ್ಮ ಕೆಲಸ. ಸಿಎಂಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ" ಎಂದರು.