ಚಿಕ್ಕಮಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷಮೆಯ ಅಗತ್ಯವೂ ಇಲ್ಲ. ಅವರ ಬೆದರಿಕೆಗೆ ನಾನು ಹೆದರುವುದು ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯನ್ನು ರಿಪಬ್ಲಿಕ್ ಆಗಲು ಜನರೂ ಒಪ್ಪಲ್ಲ. ಅದಕ್ಕೆ ನಾವು ಅವಕಾಶ ಕೊಡಲ್ಲ. ನನ್ನ ಮೇಲೆ ದೈಹಿಕ ಹಲ್ಲೆ ನಡೆದ ಸಂಬಂಧ ಕಿಶೋರ್ ಹಾಗೂ ಅರುಣ್ ದೂರು ನೀಡಿದ್ದಾರೆ. ಸುವರ್ಣ ಸೌಧದ ಪಶ್ಚಿಮ ಬಾಗಿಲಿನಲ್ಲಿ ಹಲ್ಲೆಗೆ ಮುಂದಾದ ವೇಳೆ ಅವರಿಬ್ಬರೂ ನನ್ನ ಜೊತೆ ಇದ್ದರು. ಹಾಗಾಗಿ ದೂರು ನೀಡಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿಟಿ ರವಿ (ETV Bharat) ನಾನೂ ಸಹ ದೂರು ನೀಡಿದ್ದೇನೆ, ಏನ್ ಮಾಡ್ತಾರೆ ನೋಡೋಣ:ದೂರಿನಡಿ ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಖಾನಾಪುರದಲ್ಲಿ ನಾನು ಸಹ ದೂರು ನೀಡಿದ್ದೇನೆ. ಎಫ್‌ಐಆರ್ ಪ್ರತಿ ನೀಡಿಲ್ಲ. ಎಫ್ಐಆರ್ಗಾಗಿ ಎರಡು ದಿನ ನಮ್ಮ ವಕೀಲರು ಹೋಗಿದ್ದಾರೆ. ಕಮಿಷನರ್ 15 ದಿನ ಸಮಯ ಇದೆ ಎಂದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ. ನನ್ನ ದೂರಿಗೂ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಕಮಿಷನರ್ ಆ ಜಾಗದಲ್ಲಿ ಇರಲು ಸೂಕ್ತರಲ್ಲ ಎಂದು ಕಿಡಿಕಾರಿದ್ದಾರೆ.
ಹಲ್ಲೆಗೆ ಮುಂದಾದಾಗ ಇದ್ದವರು ಲಕ್ಷ್ಮಿ ಹೆಬ್ಬಾಳ್ಕರ್ ಕಡೆಯವರು. ಯಾರೂ ಅಪರಿಚಿತರಲ್ಲ. ಇಬ್ಬರು ಹೆಬ್ಬಾಳ್ಕರ್ ಪಿಎಗಳು ಹಾಗೂ ಬಹುತೇಕ ಮುಸ್ಲಿಮರು ಇದ್ದರು. ಮಾಹಿತಿ ಸಂಗ್ರಹಿಸಿದ್ದೇನೆ. ಎಲ್ಲವನ್ನೂ ಸಂಬಂಧಪಟ್ಟವರಿಗೆ ನೀಡುತ್ತೇನೆ. ಎಲ್ಲರ ಹೆಸರು ಹಾಕಿ ದೂರು ನೀಡಿದ್ದೇನೆ. ನನ್ನ ಮೇಲೆ ಕ್ರಮ ಮಾಡ್ತಾರೆ ಅಂದ್ರೆ ಅವರ ಮೇಲೆ ಕ್ರಮ ಏಕಿಲ್ಲ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.
ನನಗೆ ಏನೂ ಆಗಿಲ್ಲ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ, ಕಾಂಗ್ರೆಸ್‌ನವರು ತುರ್ತು ಪರಿಸ್ಥಿತಿ ಮನಸ್ಥಿತಿಯಿಂದ ಹೊರಬರಬೇಕು. ಹೆಬ್ಬಾಳ್ಕರ್ ಡಾಕ್ಟರ್ ಅಲ್ಲ. ತಲೆಗೆ ಗಾಯವಾದ ಬಳಿಕವೂ ಮೂರ್ನಾಲ್ಕು ಗಂಟೆಗಳ ಕಾಲ ಚಿಕಿತ್ಸೆ ಕೊಡಿಸಿಲ್ಲ. ಖಾನಾಪುರದಲ್ಲಿ ಗಾಯವಾದರೆ, ರಾಮದುರ್ಗದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅವರ ತಪ್ಪು ಮುಚ್ಚಿಕೊಳ್ಳಲು ಆ ತಾಯಿ ಸುಳ್ಳುಗಳ ಸರಮಾಲೆಯನ್ನು ಸುರಿಸುತ್ತಿದ್ದಾರೆ. ಸುಳ್ಳನ್ನು ಸೋಲಿಸಬಹುದು. ಆದರೆ, ಸತ್ಯವನ್ನು ಸೋಲಿಸಲು ಆಗಲ್ಲ ಎಂದರು.
ಎಲ್ಲವನ್ನೂ ಹೇಳುವ ಅಗತ್ಯವಿಲ್ಲ:ಹೆಬ್ಬಾಳ್ಕರ್ ಕಣ್ಣೀರಿನಿಂದ ಲಾಭ ಪಡೆಯಬಹುದು ಅಂದುಕೊಂಡಿರಬಹುದು. ನನ್ನ ಪಿಎಗಳು ಲಂಚ ಕೇಳಿದ ಉದಾಹರಣೆಗಳಿಲ್ಲ. ಯಾರು ಸತ್ತಿಲ್ಲ. ಕೊಲೆಗಡುಕರು ಯಾರು ಎಲ್ಲವನ್ನೂ ಹೇಳುವ ಅಗತ್ಯವಿಲ್ಲ. ಯಾರ ರಾಜಕೀಯ ಹೇಗೆ ಶುರುವಾಯ್ತು ಎಂಬುದನ್ನು ಸ್ಥಳೀಯರಿಂದ ಕೇಳಬಹುದು. ಲಕ್ಷ್ಮಿ ಹೆಬ್ಬಾಳ್ಕರ್, ಮೋದಿ ಹತ್ತಿರ ಹೋಗ್ತೀನಿ ಅಂತಾರೆ, ಬಿಜೆಪಿಯವರು ಎಲ್ಲರೂ ದುಶ್ಯಾಸನರಾದರೇ ಅವರ ಬಳಿ ಏಕೆ ನ್ಯಾಯ ಕೇಳ್ತಾರೆ ? ಎಂದರು.
ಪಕ್ಕೆ, ಬೆನ್ನಿನಲ್ಲಿ ಪೆಟ್ಟಾಗಿರುವ ಮೂರರಿಂದ ನಾಲ್ಕು ಗುರುತುಗಳು ಇನ್ನೂ ಇವೆ. ಹೆಬ್ಬಾಳ್ಕರ್ ಪಿಎಗೆ ಅಷ್ಟು ಸೊಕ್ಕು ಹೇಗೆ? ಎಲ್ಲಿಂದ ಬಂತು? ಆ ಸೊಕ್ಕಿಗೆ ಕಾರಣ ಯಾರು? ಗೂಂಡಾಗಳಿಗೆ ಸುವರ್ಣಸೌಧದೊಳಗೆ ಪಾಸ್ ಕೊಟ್ಟಿದ್ದು ಯಾರು? ಅವರು ಓರ್ವ ಶಾಸಕನಿಗೆ ಸುತ್ತಾಡಿಸಿದ್ದು, ಹಿಂಸೆ ಕೊಟ್ಟಿದ್ದನ್ನ ಆ ಮಹಾತಾಯಿ ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಕೂಡ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ನಾನೇನು ಹೇಳಲ್ಲ. ತನಿಖೆ ವೇಳೆ ಎಲ್ಲವನ್ನೂ ಹೇಳಬೇಕು. ಅವರು ಸ್ವತಂತ್ರರು ಏನೇನು ಕೇಳಿಸಿಕೊಂಡರು ಹೇಳಲಿ. ಆದರೆ, ಜಾಣ ಕುರುಡು, ಜಾಣ ಕಿವುಡು ಆಗೋದು ಬೇಡ. ಕಾಲ್ ಲೀಸ್ಟ್ ತೆಗೆದರೆ ಯರ‍್ಯಾರು ಸಂಪರ್ಕದಲ್ಲಿದ್ದರು, ಯಾರು ಫೋನ್ ಮಾಡಿ ಏನೇನು ಹೇಳಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಸಿ.ಟಿ.ರವಿ ಆ ಪದ ಬಳಸಿದ್ದು ಸತ್ಯ, ನಾನೇ ಕಿವಿಯಾರೆ ಕೇಳಿದ್ದೇನೆ: ಯತೀಂದ್ರ ಸಿದ್ದರಾಮಯ್ಯ - YATHINDRA SIDDARAMAIAH