ಕರ್ನಾಟಕ

karnataka

ETV Bharat / state

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ: ಸಿ.ಟಿ.ರವಿ ಬಂಧನ - MLC CT RAVI ARRESTED

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಆರೋಪದ ಮೇಲೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬೆಳಗಾವಿಯಲ್ಲಿ ಇಂದು ಸಂಜೆ ಪೊಲೀಸರು ಬಂಧಿಸಿದರು.

MLC CT RAVI ARRESTED
ಸಿ.ಟಿ.ರವಿ ಬಂಧನ (ETV Bharat)

By ETV Bharat Karnataka Team

Published : 9 hours ago

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್​ನಲ್ಲಿ ಅಶ್ಲೀಲ ಪದ ಬಳಸಿದ ಆರೋಪದಡಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಇಂದು ಸಂಜೆ ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ.

ಇದಕ್ಕೂ ಮುನ್ನ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದ ದೂರಿನನ್ವಯ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಬಂಧನ (ETV Bharat)

ಸುವರ್ಣ ವಿಧಾನಸೌಧದಲ್ಲಿ ನಡೆದ ಪರಿಷತ್ ಕಲಾಪದಲ್ಲಿ ಮಧ್ಯಾಹ್ನ 1 ಗಂಟೆ‌ಗೆ ಸಿ.ಟಿ.ರವಿ ಅವರು, ಆಕ್ಷೇಪಾರ್ಹ ಹೇಳಿಕೆ ನೀಡಿದ್ದಲ್ಲದೇ ನನ್ನ ಕಡೆ ನುಗ್ಗಿ ಅಶ್ಲೀಲ ರೀತಿ ಸನ್ನೆ ಮಾಡಿದರು ಎಂದು ಆರೋಪಿಸಿ ಲಕ್ಷ್ಮೀ ಹೆಬ್ಬಾಳ್ಕರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಸಿ.ಟಿ.ರವಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು 79 (ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಮಾತು, ಕೈ ಸನ್ನೆ ಮತ್ತು ಅಶ್ಲೀಲ ಪದ ಪ್ರಯೋಗ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಬಂಧನಕ್ಕೆ ಪ್ರತಿರೋಧವೊಡ್ಡಿದ ಹಿನ್ನೆಲೆಯಲ್ಲಿ ಪೊಲೀಸರು ಸಿ.ಟಿ.ರವಿ ಅವರನ್ನು ಹೊತ್ತುಕೊಂಡೇ ತಮ್ಮ ವಾಹನದಲ್ಲಿ ಕರೆದೊಯ್ದರು.

ಇದಕ್ಕೂ ಮುನ್ನ ಸುವರ್ಣ ವಿಧಾನಸೌಧದಲ್ಲಿ ಸಿ.ಟಿ.ರವಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ ಘಟನೆ ಖಂಡಿಸಿ ಬಿಜೆಪಿ ನಾಯಕರು ಸೌಧದ ಮುಂಭಾಗ ಪ್ರತಿಭಟಿಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಇದನ್ನೂ ಓದಿ:ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಎಫ್​ಐಆರ್ ದಾಖಲು - FIR ON C T RAVI

ದೂರು, ಪ್ರತಿದೂರು ದಾಖಲು:ಸಿ.ಟಿ.ರವಿ ನನ್ನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಪರಿಷತ್ ಸಭಾಪತಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರು ನೀಡಿದರೆ, ಇದಕ್ಕೆ ಪ್ರತಿದೂರು ನೀಡಿರುವ ಸಿ.ಟಿ.ರವಿ, ನಾನು ಆ ರೀತಿ ಪದ ಬಳಕೆ ಮಾಡಿಲ್ಲ. ಎಲ್ಲ ಮಹಿಳೆಯರನ್ನೂ ಗೌರವದಿಂದ ಕಾಣುತ್ತೇನೆ ಎಂದು ತಿಳಿಸಿದ್ದಾರೆ.

ಏನೆಲ್ಲಾ ನಡೀತು?:

  • ವಿಧಾನ ಪರಿಷತ್‌ ಕಲಾಪವನ್ನು ಸಭಾಧ್ಯಕ್ಷರು ಮುಂದೂಡಿದ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುರಿತು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಗಂಭೀರ ಆರೋಪ ಮಾಡಿದರು.
  • ಪರಿಷತ್‌ನಲ್ಲಿ ಆಡಳಿತ, ಪ್ರತಿಪಕ್ಷದವರ ಮಧ್ಯೆ ಮಾಗ್ಯುದ್ಧಕ್ಕೆ ಕಾರಣವಾದ ಸಿ.ಟಿ.ರವಿ ಮಾತು. ಪರಸ್ಪರ ಕೆಸರೆರಚಾಟ, ಕೋಲಾಹಲ ಸೃಷ್ಟಿ.
  • ಇದಾದ ಬಳಿಕ, ಸುವರ್ಣಸೌಧದಿಂದ ಕಾರಿಡಾರ್‌ ಮೂಲಕ ಸಿ.ಟಿ.ರವಿ ಹೊರ ಹೋಗುತ್ತಿದ್ದಂತೆ ಅವರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆ ಯತ್ನ, ಅವಾಚ್ಯ ಪದಗಳಿಂದ ನಿಂದನೆ.
  • ಇದರಿಂದ ಕೋಪಗೊಂಡ ಸಿ.ಟಿ.ರವಿ, ಸ್ಥಳದಲ್ಲೇ ಪ್ರತಿಭಟನೆ ಕುಳಿತರು. ಮಾರ್ಷಲ್‌ಗಳು ಸಿ.ಟಿ.ರವಿ ಅವರ ರಕ್ಷಣೆ ಬಂದರು. ಭದ್ರತಾ ವೈಫಲ್ಯವೆಂದು ಪೊಲೀಸರ ವಿರುದ್ಧ ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಾದ ನಂತರ ಇತರೆ ಬಿಜೆಪಿ ನಾಯಕರೂ ಸ್ಥಳಕ್ಕೆ ಆಗಮಿಸಿ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು.
  • ಈ ಬೆಳವಣಿಗೆಯ ನಡುವೆ, ಹಿರೇಬಾಗೇವಾಡಿ ಪೊಲೀಸ್‌ ಠಾಣೆಗೆ ತೆರಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿ.ಟಿ.ರವಿ ವಿರುದ್ಧ ದೂರು ನೀಡಿದರು. ಈ ದೂರಿನ ಆಧಾರದಲ್ಲಿ ಪೊಲೀಸರು ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲಿಸಿಕೊಂಡರು.
  • ಸುವರ್ಣ ವಿಧಾನ ಸೌಧದ ಮೆಟ್ಟಿಲ ಮೇಲೆ ಬಿಜೆಪಿಯ ಇತರೆ ಸದಸ್ಯರೊಂದಿಗೆ ಕುಳಿತು ಸಿ.ಟಿ.ರವಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಸಿ.ಟಿ.ರವಿ ಅವರನ್ನು ಬಂಧಿಸಲು ಮುಂದಾದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ, ಹೊತ್ತುಕೊಂಡು ಪೊಲೀಸ್ ವಾಹನದೊಳಗೆ ಸೇರಿಸಿ ಕರೆದುಕೊಂಡು ಹೋದರು.

ABOUT THE AUTHOR

...view details