ಕರ್ನಾಟಕ

karnataka

ETV Bharat / state

ಮೋದಿ ಬೈದವರಿಗೆ ಬೆಳಗಾವಿ ಬಿಜೆಪಿ ಟಿಕೆಟ್: ಬಿಜೆಪಿ ಕಟ್ಟಾಳು ಮಹಾಂತೇಶ ವಕ್ಕುಂದ ಬಂಡಾಯ - Mahantesh Vakkunda

ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋದವರಿಗೆ, ಮೋದಿ ಅವರನ್ನು ಬೈದ ಅವಕಾಶವಾದಿ ರಾಜಕಾರಣಿಗೆ ಬೆಳಗಾವಿ ಟಿಕೆಟ್ ನೀಡಿದ್ದಾರೆ ಎಂದು ಬಿಜೆಪಿ ಮಹಾನಗರ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಅವರು ತಿಳಿಸಿದ್ದಾರೆ.

mahantesh-vakkunda
ಬಿಜೆಪಿ ಮಹಾನಗರ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ

By ETV Bharat Karnataka Team

Published : Mar 29, 2024, 3:17 PM IST

ಬಿಜೆಪಿ ಮಹಾನಗರ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ

ಬೆಳಗಾವಿ :ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬೇಡವಾದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದ್ದಾರೆ. ಸ್ಥಳೀಯ ಆಕಾಂಕ್ಷಿಗಳಿಗೆ ಅವಕಾಶ ಮಾಡಿಕೊಡದೇ ಅನ್ಯಾಯ ಮಾಡಿದ್ದಾರೆ. ಹಾಗಾಗಿ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದು ಬಿಜೆಪಿ ಮಹಾನಗರ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ತಿಳಿಸಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಸಂಜಯ ಪಾಟೀಲ ಮತ್ತು ನಾನು ಸೇರಿ ಮತ್ತಿತರರು ಟಿಕೆಟ್ ಕೇಳಿದ್ದೆವು. ಆದರೆ, ಸ್ಥಳೀಯ ಯಾವೊಬ್ಬರನ್ನು ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಸ್ವಾಭಿಮಾನಿ ಬೆಳಗಾವಿಗರಾಗಿ, ಬೆಳಗಾವಿಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕಿತ್ತು. ನನಗೆ ಟಿಕೆಟ್ ನೀಡಿ ಅಂತಾ ನಾನು ಹೇಳುತ್ತಿಲ್ಲ. ಸ್ಥಳೀಯ ಯಾರಾದರೂ ಒಬ್ಬರಿಗೆ ಕೊಟ್ಟಿದ್ದರೂ ನಾವು ಒಪ್ಪುತ್ತಿದ್ದೆವು. ಆದರೆ, ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋದವರಿಗೆ, ಮೋದಿ ಅವರನ್ನು ಬೈದ ಅವಕಾಶವಾದಿ ರಾಜಕಾರಣಿಗೆ ಬೆಳಗಾವಿ ಟಿಕೆಟ್ ನೀಡಿದ್ದಾರೆ. ಹಾಗಾಗಿ, ಬೆಳಗಾವಿ ಮನೆ ಮಗ, ಜಿಲ್ಲೆಯಲ್ಲಿ ಪಕ್ಷ ಬೆಳೆಸಿದ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದೇನೆ. ಭಾನುವಾರ ಸಮಾನ ಮನಸ್ಕರ ಸಭೆ ಕರೆದು, ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಈವರೆಗೆ ಬಿಜೆಪಿಯ ಯಾವೊಬ್ಬರು ನನ್ನ ಸಂಪರ್ಕಿಸಿಲ್ಲ. ನನ್ನ ಸಂಪರ್ಕಿಸಲಿ, ಬಿಡಲಿ. ನಮ್ಮ ಪ್ರಯತ್ನ ಮುಂದುವರಿಯುತ್ತದೆ. ಬಿಜೆಪಿ ಪಕ್ಷದ ನಿರ್ಧಾರದ ವಿರುದ್ಧ ನಮ್ಮ ಹೋರಾಟ. ನಮ್ಮ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ಮೋದಿ ತಂಡವನ್ನು ಸೇರಿಕೊಳ್ಳುತ್ತೇನೆ. ನಾನು ಕಟ್ಟಾ ಹಿಂದೂತ್ವವಾದಿ, ನಾನು ಜಾತಿ ರಾಜಕಾರಣ ಯಾವತ್ತೂ ಮಾಡೋದಿಲ್ಲ ಎಂದ ಮಹಾಂತೇಶ ವಕ್ಕುಂದ, ಬೆಳಗಾವಿ ನನ್ನ ಜನ್ಮಭೂಮಿ, ಕರ್ಮಭೂಮಿ, ಸ್ಥಾನಿಕ ವ್ಯಕ್ತಿ ಎಂದು ಶೆಟ್ಟರ್​ಗೆ ತಿರುಗೇಟು ಕೊಟ್ಟರು.

ಸರ್ವೇ ಎಂಬುದೇ ಶುದ್ದ ಸುಳ್ಳು. ಸರ್ವೇಯಲ್ಲಿ ಹೆಸರೇ ಇಲ್ಲದ ಧಾರವಾಡ, ಹಾವೇರಿ ಟಿಕೆಟ್ ಸಿಗದೇ ಇದ್ದಾಗ ಮೂರನೇ ದರ್ಜೆ ಎಂಬಂತೆ ಬೆಳಗಾವಿ ಟಿಕೆಟ್ ಜಗದೀಶ ಶೆಟ್ಟರ್ ಅವರಿಗೆ ನೀಡಿದ್ದಾರೆ. ಜನ ಮೋದಿ ಅವರಿಗೆ ವೋಟ್ ಹಾಕಬೇಕು ಎಂಬುದನ್ನು ನಿರ್ಧರಿಸಿ ಆಗಿದೆ. ಹಾಗಾಗಿ, ನಾವು ಕೂಡ ಮೋದಿ ಹೆಸರು ಹೇಳಿಕೊಂಡೇ ಚುನಾವಣೆಗೆ ಹೋಗುತ್ತೇವೆ ಎಂದು ಮಹಾಂತೇಶ ವಕ್ಕುಂದ ಸ್ಪಷ್ಟಪಡಿಸಿದರು.

ಇದನ್ನೂ ಓದಿ :ಹಾಸನದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೆಸರಲ್ಲಿ 40 ಕೋಟಿ ರೂ ಆಸ್ತಿ - Prajwal Revanna Affidavit

ABOUT THE AUTHOR

...view details