ಬೆಂಗಳೂರು : ಬರ ನಿರ್ವಹಣೆ ವೈಫಲ್ಯ, ಕಮಿಷನ್ ಆರೋಪ, ಕೇಂದ್ರದ ವಿರುದ್ಧ ಅನುದಾನ ಹಂಚಿಕೆ ತಾರತಮ್ಯ ಆರೋಪ ಕುರಿತು ಉಭಯ ಸದನಗಳಲ್ಲಿ ಪ್ರಸ್ತಾಪಿಸಿ ಹೋರಾಟ ನಡೆಸುವ ನಿರ್ಧಾರವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಸೋಮವಾರ ರಾತ್ರಿ ನಗರದ ರ‍್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರತಿ ಪಕ್ಷದ ನಾಯಕ ಆರ್. ಅಶೋಕ್, ಲೋಕಸಭಾ ಚುನಾವಣಾ ಪ್ರಭಾರಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್, ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.
ಶಾಸಕಾಂಗ ಪಕ್ಷದ ಸಭೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಎಸ್.ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಹಾಗೂ ರಮೇಶ್ ಜಾರಕಿಹೊಳಿ ಗೈರಾಗಿದ್ದರು.
ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್, ಈ ಸರ್ಕಾರ ಕಳೆದ ಎಂಟು ತಿಂಗಳಿನಿಂದ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಅವರ ಸದಸ್ಯರೇ ಹೇಳಿದಂತೆ 50 ಪರ್ಸೆಂಟ್ ಲೂಟಿ ಮಾಡುತ್ತಿದೆ. ಬರದ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸಿ ಬಚಾವಾಗಲು ನೋಡುತ್ತಿದ್ದಾರೆ. ರೈತರಿಗೆ ಹಣ ಬಿಡುಗಡೆ ಮಾಡಿಲ್ಲ. ಕಾನೂನು ವ್ಯವಸ್ಥೆ ಪಾತಾಳಕ್ಕೆ ಹೋಗಿದೆ. ಮತ್ತೆ ಭಯೋತ್ಪಾದಕ ಚಟುವಟಿಕೆ ತಲೆಯೆತ್ತಿದೆ. ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಈ ಎಲ್ಲ ವಿಚಾರಗಳ ಸಂಬಂಧ ನಮ್ಮ ಎಲ್ಲ ಶಾಸಕರು ಮಾಹಿತಿ ಕೊಟ್ಟಿದ್ದಾರೆ.
ಕಳೆದ ಎಂಟು ತಿಂಗಳದಿಂದ ಯಾವುದೇ ರೀತಿಯ ಅನುದಾನ ಬಂದಿಲ್ಲ. ಬಿಜೆಪಿ ಸರ್ಕಾರದ ವೇಳೆ ಕೊಟ್ಟ ಅನುದಾನವನ್ನು ವಾಪಸ್ ಪಡೆಯುತ್ತಿದ್ದಾರೆ. ಟೆಂಡರ್ ಆಗಿರುವ ಹಾಗೂ ಕೆಲಸ ಶುರುವಾಗಿರುವ ಕಾಮಗಾರಿಗಳ ಅನುದಾನವನ್ನು ವಾಪಸ್ ಪಡೆಯುತ್ತಿದ್ದಾರೆ. ಇದರ ಬಗ್ಗೆಯೂ ಚರ್ಚೆ ಆಯಿತು. ಒಟ್ಟಾರೆಯಾಗಿ ಈ ಸದನದಲ್ಲಿ ಒಗ್ಗಟ್ಟಾಗಿ, ಸರ್ಕಾರ ಮಾಡುತ್ತಿರುವ ತಪ್ಪುಗಳನ್ನು ಜನರ ಮುಂದೆ ಇಡುವ ಕೆಲಸವನ್ನು ಮಾಡುವ ತೀರ್ಮಾನ ಮಾಡಿದ್ದೇವೆ ಎಂದರು.
ಈ ಬಾರಿ ಸದನದಲ್ಲಿ ಸಾಂಘಿಕ ಹೋರಾಟದ ಮುಖಾಂತರ ಸರ್ಕಾರನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಯಾವ ಯಾವ ವಿಚಾರದಲ್ಲಿ ಹೋರಾಟ ನಡೆಸಬೇಕು ಎನ್ನುವ ಕುರಿತು ಚರ್ಚಿಸಿದ್ದೇವೆ. ಈ ಬಾರಿ ಸರ್ಕಾರದ ಲೋಪದೋಷ, ಸರ್ಕಾರದ ಭ್ರಷ್ಟಾಚಾರವನ್ನು ಜನರ ಮುಂದಿಡುವ ಕೆಲಸವನ್ನು ನಾವು ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಜೊತೆ ನಾನು ಮಾತುಕತೆ ನಡೆಸುತ್ತೇನೆ. ಇದು ಗಂಭೀರ ಆರೋಪ. ಕಾಂಗ್ರೆಸ್ ಪಕ್ಷದ ಸದಸ್ಯ ಶಿವರಾಂ ಫಿಫ್ಟಿ ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಇದು ಕೂಡ ಬಹಳ ಪ್ರಮುಖ ವಿಚಾರ. ಇದನ್ನು ಕೂಡ ವಿಧಾನಸಭೆಯಲ್ಲಿ ನಾವು ಪ್ರಸ್ತಾಪಿಸಿ ಚರ್ಚೆ ಮಾಡುತ್ತೇವೆ. ಪ್ರಬಲ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಆರ್. ಅಶೋಕ್ ವಿವರಿಸಿದರು.
ಸಿಎಂ ಹಣೆಯ ಮೇಲೆ 40 ಪರ್ಸೆಂಟ್ ಆರೋಪ :ಇದು ಲೂಟಿಕೋರರ ಸರ್ಕಾರ ಎನ್ನುವ ಹಣೆಪಟ್ಟಿಯಾಗಿದೆ. ಹಿಂದೆ ಸಿದ್ದರಾಮಯ್ಯ ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಆದರೆ, ಇಂದು ಸಿದ್ದರಾಮಯ್ಯ ಹಣೆಗೆ 40 ಪರ್ಸೆಂಟ್ ಕಮಿಷನ್ ಆರೋಪ ಬಂದಿದೆ. ಅಂದು ನಮ್ಮ ಮೇಲೆ ಆರೋಪ ಮಾಡಿದ್ದವರೇ ಇಂದು ಸಿದ್ದರಾಮಯ್ಯ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಹಣೆಯ ಮೇಲೆ 40 ಪರ್ಸೆಂಟ್ ಕಮಿಷನ್ ಪಟ್ಟಿಯನ್ನು ಹಚ್ಚಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಕೆಂಪಣ್ಣ ಕಾಂಗ್ರೆಸ್ ಪರವಾಗಿ ಆಪಾದನೆ ಮಾಡುತ್ತಿದ್ದಾರೆ ಎನ್ನುವ ಆಪಾದನೆ ಬಂದಿತ್ತು. ಈಗ ನಾನು ಯಾವ ಪಕ್ಷದ ಪರ ಇಲ್ಲ ಎನ್ನುವುದನ್ನು ತೋರಿಸಲು ಸದಾವಕಾಶ ಬಂದಿದೆ. ಹಾಗಾಗಿ ದಾಖಲೆ ಏನೇನು ಇದೆಯೋ ಅವೆಲ್ಲವನ್ನ ಕೊಡಿ, ನನಗೂ ಎಲ್ಲ ದಾಖಲೆ ಕೊಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ನಾನು ಈ ಪ್ರಕರಣ ಸಿಬಿಐ ತನಿಖೆ ನಡೆಸುವಂತೆ ಆಗ್ರಹ ಮಾಡಿದ್ದೇನೆ. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆಯೂ ಒತ್ತಾಯ ಮಾಡುತ್ತೇವೆ ಎಂದರು.
ರಾಜ್ಯಪಾಲರ ಭಾಷಣದಲ್ಲಿ ಉಪ್ಪು ಹುಳಿ ಏನೂ ಇಲ್ಲ. ದೂರದೃಷ್ಟಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮೆಟ್ರೋ ಕೇಂದ್ರದ ಯೋಜನೆ, ಜಲಜೀವನ್ ಮಿಷನ್ ಸಹ ಕೇಂದ್ರದ ಯೋಜನೆ, ಶಿವಮೊಗ್ಗ ವಿಮಾನ ನಿಲ್ದಾಣ ನಮ್ಮ ಸರ್ಕಾರದ ಇದ್ದಾಗಲೇ ಮುಗಿದಿದೆ. ಆದರೆ, ಇದೆಲ್ಲವನ್ನು ನಾವೇ ಮಾಡಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ಒಂದೇ ಒಂದು ಹೊಸ ನೀರಾವರಿ ಯೋಜನೆ ಘೋಷಣೆ ಮಾಡಿಲ್ಲ. ಯಾವುದೇ ಅಭಿವೃದ್ಧಿ ಯೋಜನೆ ಮಾಡಿಲ್ಲ. ರಸ್ತೆ, ಕುಡಿಯುವ ನೀರಿನ ಬಗ್ಗೆ ಯಾವುದನ್ನು ರಾಜಪಾಲರ ಭಾಷಣದಲ್ಲಿ ಉಲ್ಲೇಖಿಸಿಲ್ಲ. ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿದ್ದಾರೆ. ಇದಕ್ಕಾಗಿ ಸಿದ್ದರಾಮಯ್ಯ ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಆರ್. ಅಶೋಕ್ ವ್ಯಂಗ್ಯವಾಡಿದರು.
ಕರ್ನಾಟಕ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದ ಕಾರಣ ಕಾವೇರಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ತಮಿಳುನಾಡಿನ ಸ್ಟಾಲಿನ್ ಇಲ್ಲಿರುವ ಸರ್ಕಾರದ ದೋಸ್ತಿಯಾಗಿದ್ದಾರೆ. ಅವರನ್ನು ವೆಸ್ಟ್ ಎಂಡ್ಗೆ ಕರೆದು ಒಳ್ಳೆಯ ಊಟ ಹಾಕಿದ್ದಾರೆ. ಸ್ಟಾಲಿನ್ ಮನವೊಲಿಸುವ ಅವಕಾಶ ಇತ್ತು. ಆದರೆ ಆ ಕೆಲಸವನ್ನು ಮಾಡದೇ ರಾಜಕಾರಣ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಕುಡಿಯುವ ನೀರಿಗೆ ಆಹಾಕಾರ ಬಂದಿದ್ದರೆ ಇದಕ್ಕೆ ನೇರ ಕಾರಣ ಕಾಂಗ್ರೆಸ್ ನಾಯಕರು. ರಾಜ್ಯದ ಹಿತವನ್ನು ಬಿಟ್ಟು ವೋಟ್ ಪೊಲಿಟಿಕ್ಸ್ ಮಾಡಿದ್ದ ಕಾರಣ ಕರ್ನಾಟಕಕ್ಕೆ ಕುಡಿಯುವ ನೀರಿನ ಅಭಾವ ಬಂದಿದೆ ಎಂದು ಆರ್. ಅಶೋಕ್ ಆರೋಪಿಸಿದರು.
ಇದನ್ನೂ ಓದಿ :ಬಿಬಿಎಂಪಿ ಆಯುಕ್ತರ ಕೈಗೆ ಬೀಗ ಕೊಟ್ಟು ತೆರಿಗೆ ವಿನಾಯಿತಿಗೆ ಆಗ್ರಹಿಸಿದ ಬಿಜೆಪಿ ಶಾಸಕರು