ಚಾಮರಾಜನಗರ:ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕಾಗಿರುವುದು ನಾಗರೀಕ ಸರ್ಕಾರದ ಜವಾಬ್ದಾರಿಯಾಗಿದೆ. ನೀತಿ ಸಂಹಿತೆ ಮುಗಿದ ನಂತರ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಒತ್ತಾಯಿಸಿದರು.
ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಮತಗಟ್ಟೆ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಮಹಿಳೆಯರು ಜಾಮೀನಿನ ಮೇಲೆ ಬಂದ ನಂತರ ಅವರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಭಾನುವಾರದಂದು ಗ್ರಾಮಕ್ಕೆ ಅವರು ಭೇಟಿ ನೀಡಿ ಮಾತನಾಡಿದರು.
"ಮಲೆ ಮಹದೇಶ್ವರ ಬೆಟ್ಟ ಕಾಡಂಚಿನ ಗ್ರಾಮಗಳಲ್ಲಿನ ಜನರು ಮೂಲಭೂತ ಸೌಕರ್ಯಗಳಿಲ್ಲದೇ ಕಾಡುಪ್ರಾಣಿಗಳಿಗಿಂತ ಹೀನಾಯವಾಗಿ ಬದುಕುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ನೀತಿ ಸಂಹಿತೆ ಮುಗಿದ ತಕ್ಷಣ ಗ್ರಾಮಕ್ಕೆ ಸುಸಜ್ಜಿತ ರಸ್ತೆ, ವಿದ್ಯುತ್, ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಗ್ರಾಮದ ಶಾಲೆಗೆ ಇನ್ನಷ್ಟು ಶಿಕ್ಷಕರುಗಳನ್ನು ನಿಯೋಜನೆ ಮಾಡಬೇಕು. ನೀವು ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟರೆ ಅವರೇ ಮುಂದಿನ ಚುನಾವಣೆಗಳಲ್ಲಿ ಮತದಾನ ಮಾಡುತ್ತಾರೆ. ಗ್ರಾಮಸ್ಥರಿಗೆ ನಾಗರಿಕ ಸೌಲಭ್ಯ ಸಿಕ್ಕಿಲ್ಲವಾದರೆ ಮುಂದಿನ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದರೆ ನಾನು ಸಹ ಮೊದಲಿಗನಾಗಿ ಅವರ ಜೊತೆ ಕೈಜೋಡಿಸುತ್ತೇನೆ. ಆಗ ನೀವು ನನ್ನನ್ನು ಬಂಧಿಸಲಿ ನೋಡೋಣ" ಎಂದರು.
"ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಬಹಳ ಶ್ರೇಷ್ಠವಾದ ಹಕ್ಕು, ಇದು ಚಲಾವಣೆಯಾಗಬೇಕೆಂದರೆ ಮೂಲಭೂತ ಸೌಲಭ್ಯಗಳನ್ನು ಕೊಡಿ. ಸಮಸ್ಯೆಗಳನ್ನು ಉಲ್ಬಣ ಮಾಡಬೇಡಿ ಇದು ರಾಜ್ಯ ಹಾಗೂ ಜಿಲ್ಲೆಗೆ ಹಬ್ಬುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಕಾಡಂಚಿನ ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ನಾಗರಿಕ ಸರಕಾರ ಎಂಬುದನ್ನು ಸಾಬೀತು ಮಾಡಿ" ಎಂದು ಸವಾಲು ಎಸೆದರು.
ವಿದ್ಯಾರ್ಥಿಗಳನ್ನು ಹಾಸ್ಟೆಲ್ಗೆ ಸೇರಿಸಿ:ಇಂಡಿಗನತ್ತ ಗ್ರಾಮದಲ್ಲಿ ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ಮಾತ್ರ ಶಿಕ್ಷಣಕ್ಕೆ ಅವಕಾಶ ಇರುವುದರಿಂದ ಉನ್ನತ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ತಮ್ಮ ಮಕ್ಕಳನ್ನು ಹಾಸ್ಟೆಲ್ನಲ್ಲಿ ಸೇರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಈ ನಿಟ್ಟಿನಲ್ಲಿ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇವಿಎಂ ಧ್ವಂಸ ಮಾಡಬಾರದಿತ್ತು: ಗ್ರಾಮಸ್ಥರು ಇವಿಎಂ ಮತಯಂತ್ರವನ್ನು ಧ್ವಂಸ ಮಾಡಬಾರದಿತ್ತು, ಬಿಳಿ ಪಂಚೆ ಬಿಳಿ ಪ್ಯಾಂಟ್ ಹಾಕಿಕೊಂಡು ಬರುವಂತಹ ನಮ್ಮಂತಹ ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡಿದ್ದರೆ ಈ ಸಮಸ್ಯೆಗಳೇ ಬರುತ್ತಿರಲಿಲ್ಲ. ಕಳೆದ 70 ವರ್ಷಗಳಿಂದ ನಮಗೆ ಮೂಲಭೂತ ಸೌಲಭ್ಯ ಕೊಡದೆ ಜೀವನ ನಡೆಸಿದ್ದೇವೆ. ನಾವು ಏಕೆ ಮತ ಹಾಕಬೇಕು ಎಂದು ಆತ್ಮಾವಲೋಕನ ಮಾಡಿಕೊಂಡಿದ್ದರೆ ಅವರ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಎಂದು ಎನ್ ಮಹೇಶ್ ಸಹಮತ ವ್ಯಕ್ತಪಡಿಸಿದರು.