ಬೆಂಗಳೂರು:ಬಿಜೆಪಿ ಹಾಲಿ ಹಾಗೂ ಮಾಜಿ ಶಾಸಕರು, ಇತರೆ ಮುಖಂಡರು ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿಯಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಂಡಾಯದ ಬಗ್ಗೆ ಚರ್ಚೆ ನಡೆಸಿದರು.
ವಕ್ಫ್ ವಿರುದ್ಧ ಮುಂದಿನ ಹೋರಾಟ ಹಾಗೂ ಪ್ರಸ್ತುತ ರಾಜ್ಯದಲ್ಲಿನ ವಿದ್ಯಮಾನಗಳ ಬಗ್ಗೆ ಚರ್ಚಿಸಿದ ಮಾಜಿ ಶಾಸಕರು, ಯತ್ನಾಳ್ ಪ್ರತ್ಯೇಕ ಹೋರಾಟ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆ ಸಂಬಂಧ ತಮ್ಮ ಅಹವಾಲುಗಳನ್ನು ಯಡಿಯೂರಪ್ಪ ಮುಂದಿಟ್ಟರು. ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಇಲ್ಲವಾದರೆ ಪಕ್ಷಕ್ಕೆ ಧಕ್ಕೆಯಾಗುತ್ತದೆ. ಆ ಮೂಲಕ ಸಂದೇಶ ರವಾನಿಸಬೇಕು ಎಂದು ಆಗ್ರಹಿಸಿದರು.
ಬಿ.ಸಿ.ಪಾಟೀಲ್, ಎಂ.ಪಿ.ರೇಣುಕಾಚಾರ್ಯ, ಹರತಾಳು ಹಾಲಪ್ಪ, ಕಟ್ಟ ಸುಬ್ರಮಣ್ಯ ನಾಯ್ಡು, ವೈ.ಸಂಪಂಗಿ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ಬಳಿಕ ಮಾತನಾಡಿದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ''ಕುಂಟ ಕಲ್ಲಂಗಡಿ ಹೊಲ ಕಾದಂಗೆ ಅವರ ಪರಿಸ್ಥಿತಿ. ಡಿ.10ರಂದು ದಾವಣಗೆರೆಯಲ್ಲಿ ಸಂಜೆ 5 ಗಂಟೆಗೆ 60ಕ್ಕೂ ಹೆಚ್ಚು ಮಂದಿ ಸೇರುತ್ತೇವೆ. ನಂತರ ನಿರ್ಧಾರ ಮಾಡ್ತೇವೆ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಬೇಕು. ವಿಜಯೇಂದ್ರ ಸಾರಥ್ಯದಲ್ಲಿ ಚುನಾವಣೆ ನಡೆಯಲಿದೆ. 40ಕ್ಕೂ ಹೆಚ್ಚು ಶಾಸಕರು ಸೇರಿ ಮಾತಾಡಿದ್ದೇವೆ. ವಿಜಯೇಂದ್ರ ಅವರೇ ಮುಂದಿನ ಚುನಾವಣೆವರೆಗೆ ಅಧ್ಯಕ್ಷರಾಗಿರ್ತಾರೆ. ನಾವು ಯಡಿಯೂರಪ್ಪ ಜೊತೆಗಿದ್ದೇವೆ ಎಂಬ ಸಂದೇಶ ಕೊಟ್ಟಿದ್ದೇವೆ'' ಎಂದು ತಿಳಿಸಿದರು.
ನಿಮ್ಮ ಹಾಗೆ ಪೇಪರ್ ಸಿಂಹ ಅಲ್ಲ:ಇದೇ ವೇಳೆ ಪ್ರತಾಪ್ ಸಿಂಹ ಅವರಿಗೆ ಕೌಂಟರ್ ನೀಡಿದ ರೇಣುಕಾಚಾರ್ಯ, ''ಪೇಪರ್ ಸಿಂಹ ನನ್ನ ಬಗ್ಗೆ ಮಾತಾಡಿದ್ದಾರೆ. ನಾನು ನಿಮ್ಮ ಹಾಗೆ ಪೇಪರ್ ಸಿಂಹ ಅಲ್ಲ. ಮೈಸೂರು-ಕೊಡಗು ಭಾಗದಲ್ಲಿ ಎಷ್ಟು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರನ್ನು ಗೆಲ್ಲಿಸಿದ್ದೀರಿ. ನಿನಗೆ ಟಿಕೆಟ್ ಕೊಡಬಾರದು ಅಂಥಾ ಯಾರೆಲ್ಲ ಪತ್ರ ಬರೆದಿದ್ದಾರೆ ಅಂತಾ ಗೊತ್ತು. ಇಂತಹವರ ಬಗ್ಗೆ ನಾನ್ಯಾಕೆ ಮಾತಾಡಲಿ?'' ಎಂದು ತಿರುಗೇಟು ನೀಡಿದರು.