ಕರ್ನಾಟಕ

karnataka

ETV Bharat / state

ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಜೆಪಿ ನಾಯಕರಿಂದ ಆಗ್ರಹ - Valmiki Corporation scam - VALMIKI CORPORATION SCAM

ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

BJP LEADERS ALLEGATION  CM SIDDARAMAIAH  BENGALURU
ಬಿಜೆಪಿ ನಾಯಕರು ಆರೋಪ (ETV Bharat)

By ETV Bharat Karnataka Team

Published : Jul 13, 2024, 8:16 PM IST

ಬಿಜೆಪಿ ನಾಯಕರು ಆರೋಪ (ETV Bharat)

ಬೆಂಗಳೂರು: ರಾಜ್ಯದಲ್ಲಿ ನಡೆಸಿರುವ ಹಗರಣಗಳಿಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಅನಾವರಣ ಆಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಸರ್ಕಾರವು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಅದನ್ನು ಖಂಡಿಸುತ್ತೇವೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಸಮಾಜವಾದದ ಚಿಂತನೆಗಳು ಕಳಚಿ ಬಿದ್ದಿವೆ. ಸಮಾಜವಾದದ ಚಿಂತನೆ ಇದ್ದರೆ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿರಲಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ 17 ಶಾಸಕರಿದ್ದಾರೆ. ಈ ಪೈಕಿ 16 ಜನರು ಕಾಂಗ್ರೆಸ್ಸಿನವರು. 3 ಜನ ಲೋಕಸಭಾ ಸದಸ್ಯರು ಗೆದ್ದಿದ್ದಾರೆ. ವಾಲ್ಮೀಕಿ ನಿಗಮಕ್ಕೆ ಮಾರ್ಚ್ 21ರಂದು ರಾಜ್ಯ ಸರ್ಕಾರವು 187 ಕೋಟಿ ಹಣ ವರ್ಗಾವಣೆ ಮಾಡಿತ್ತು. ಮೇ 26 ರವರೆಗೆ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವವರೆಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ಹಗರಣ ಬಂದಿಲ್ಲವಾದರೆ ಆ ಎರಡು ತಿಂಗಳು ರಾಜ್ಯದಲ್ಲಿ ಸರ್ಕಾರ ಇತ್ತೇ ಎಂದು ಪ್ರಶ್ನಿಸಿದರು.

ಅರಣ್ಯ ಪ್ರದೇಶದಲ್ಲಿ ವಾಸವಿರುವ ಜನಾಂಗದವರಿಗೂ ಈ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಸಂದೇಹ ಉಂಟಾಗಿದೆ. ಹಗರಣದ ಚರ್ಚೆ ನಡೆದಾಗ ಸಚಿವರಿಗೂ ಹಗರಣಕ್ಕೂ ಸಂಬಂಧ ಇಲ್ಲ ಎಂದೇ ಮುಖ್ಯಮಂತ್ರಿಯವರು ಹೇಳಿದ್ದರು. ಎಸ್‍ಐಟಿ ರಚಿಸಿದ ಬಳಿಕ ಕೂಡ ಸಚಿವರು ನಿರಪರಾಧಿ ಎಂದೇ ಹೇಳಿದ್ದರು ಎಂದು ಟೀಕಿಸಿದರು.

ಸಮಾಜವಾದಿ ಎಂಬ ಪದಕ್ಕೆ ಕಳಂಕ: ನಾಗೇಂದ್ರರನ್ನು ಇ.ಡಿ. ಬಂಧಿಸಿದ ಬಳಿಕ ಖಾಸಗಿ, ನಕಲಿ ಖಾತೆಗಳಿಗೆ ಹಣ ವರ್ಗಾವಣೆ, ನಾಗೇಂದ್ರರ ಕೈವಾಡದ ಕುರಿತು ಮುಖ್ಯಮಂತ್ರಿಗಳನ್ನು ಮಾಧ್ಯಮದವರು ಪ್ರಶ್ನಿಸಿದ್ದರು. ಯಾವ ವರದಿ ಬಂದಿದೆ? ಎಂಬ ಅವರ ಪ್ರಶ್ನೆ, ಸಮಾಜವಾದಿ ಎಂಬ ಪದಕ್ಕೆ ಕಳಂಕ ತಂದಂತಿದೆ. ಪದೇ ಪದೇ ನಾನು ಹಿಂದುಳಿದ ವರ್ಗಗಳ ನಾಯಕ ಎನ್ನುವ ಸಿದ್ದರಾಮಯ್ಯನವರು ದಲಿತರಿಗೆ, ಶೋಷಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಿದ್ದಾರೆ. ಹಾಗಿದ್ದರೆ ಅವರು ಯಾವ ನೈತಿಕತೆಯಲ್ಲಿ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಪ್ರಶ್ನೆ ಮಾಡಿದರು.

ವಿದ್ಯಾಸಿರಿ ನಿಲ್ಲಿಸಿದ್ದಾರೆ. ಶೂ ಕೊಡಲು ಯೋಗ್ಯತೆ ಇಲ್ಲ. ಮಕ್ಕಳಿಗೆ ಪುಸ್ತಕ ಕೊಡುತ್ತಿಲ್ಲ; ಹಾಸ್ಟೆಲ್‍ಗಳಲ್ಲಿ ಊಟವನ್ನೂ ನೀಡುತ್ತಿಲ್ಲ. ಹಲವು ಮಕ್ಕಳು ವಿದ್ಯಾಭ್ಯಾಸ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು. ಗ್ಯಾರಂಟಿಗಳ ಮೂಲಕ ನಿಗಮಗಳ ಕತ್ತನ್ನೇ ಹಿಸುಕಿದ್ದಾರೆ. ಜನಸಂದರ್ಶನದ ವೇಳೆ ಯುವಕರು ಕೊಟ್ಟ ಅರ್ಜಿಗಳನ್ನು ತಿಪ್ಪೆಗೆ ಎಸೆಯಲಾಗಿದೆ. ಖಜಾನೆ ಖಾಲಿ ಮಾಡಿಕೊಂಡು ಸರ್ಕಾರ ನಡೆಸಲು ಯೋಗ್ಯತೆ ಇಲ್ಲದೆ ಇದ್ದರೆ, ದಲಿತರ ಹಣದಲ್ಲಿ ಸರ್ಕಾರ ನಡೆಸುವುದಾದರೆ ದಯವಿಟ್ಟು ಕುರ್ಚಿ ಬಿಟ್ಟು ಮನೆ ಕಡೆ ಹೋಗಿ ಎಂದು ಆಕ್ರೋಶ ಹೊರಹಾಕಿದರು.

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಎಸ್‍ಇಪಿ ಟಿಎಸ್‍ಪಿ ದಲಿತರ ಹಣ ದುರುಪಯೋಗದ ಬಗ್ಗೆ ನಾವು ಹಲವು ಬಾರಿ ಗಮನ ಸೆಳೆದಿದ್ದೇವೆ. ಕಳೆದ ಆರ್ಥಿಕ ವರ್ಷದಲ್ಲಿ ದಲಿತ ಸಮುದಾಯದ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟಿದ್ದ 11,114 ಕೋಟಿ ರೂ.ಗಳನ್ನು ಈ ಸರ್ಕಾರ ಬೇರೆ ಬೇರೆ ಕಾರ್ಯಗಳಿಗೆ ದುರುಪಯೋಗ ಪಡಿಸಿಕೊಂಡಿತ್ತು. 7ಡಿ ರದ್ದು ಮಾಡುವುದಾಗಿ ಹೇಳಿದ್ದರು. ಅದರಂತೆ 7ಡಿ ರದ್ದು ಮಾಡಿದ್ದರು. ಆದರೂ, ದಲಿತರಿಗಾಗಿ ಮೀಸಲಿಟ್ಟ 14,282 ಕೋಟಿ ರೂಗಳನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. 7ಡಿ ರದ್ದು ಮಾಡಿದ್ದು, 7ಸಿನಲ್ಲಿ ಗ್ಯಾರಂಟಿಗೆ ಹಣ ಕೊಡುತ್ತಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಉಪ ಯೋಜನೆಯಡಿ ಸೇರಿದ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ ದೈಹಿಕ ವಿಕಲಚೇತನರ ಸ್ಕೀಮ್‍ಗಳಿಗೆ ಬಳಸುವಂತೆ 7ಸಿ ಹೇಳುತ್ತದೆ. ಆದರೆ, ಗ್ಯಾರಂಟಿಗಳು ಇದರಡಿ ಬರುವುದಿಲ್ಲ ಎಂದು ಎಚ್ಚರಿಸಿದರು.

ಸಿಎಂ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ: ಸಿಎಂ ಸಿದ್ದರಾಮಯ್ಯನವರು ದಲಿತರ ಅನ್ನದ ತಟ್ಟೆಗೆ ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ. ರಾಜೀವ್ ಟೀಕಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ದಲಿತ ಸಂಘಟನೆಗಳು ತಮ್ಮ ಹಕ್ಕಿಗಾಗಿ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು. ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ದಲಿತ ಶಾಸಕರು ತಮಗಾದ ಅನ್ಯಾಯಗಳ ಕುರಿತು ಧ್ವನಿ ಎತ್ತಬೇಕು. ಅಲ್ಲದೆ ಸ್ವಾಭಿಮಾನ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಬೇಕು ಎಂದು ತಿಳಿಸಿದರು.

ಎಸ್‍ಸಿ ಮೋರ್ಚಾ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜು ಮಾತನಾಡಿ, ದಲಿತರ ಹಣ ಲೂಟಿ ಸಮಂಜಸವಲ್ಲ. ಇದು ಸಮುದಾಯದ ಪರವಾಗಿ ಹೋರಾಟ. ದಲಿತ ನಾಯಕರು, ದಲಿತ ಶಾಸಕರು ಪ್ರತಿಭಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ದಲಿತ ಫಲಾನುಭವಿಗಳಿಗೆ ಭೂಮಿ ಕೊಡಲು ವಿವಿಧ ನಿಗಮಗಳಿಗೆ 1,169 ಕೋಟಿ ಬೇಕಿದೆ. ಈ ಕಡೆ ಸಿದ್ದರಾಮಯ್ಯರ ಸರ್ಕಾರ ಗಮನ ಕೊಟ್ಟಿಲ್ಲ. ಗಂಗಾ ಕಲ್ಯಾಣ ಯೋಜನೆಯನ್ನೂ ಕಡೆಗಣಿಸಿದೆ. ಇದಕ್ಕೆ 650 ಕೋಟಿ ಕೊಡಬೇಕಿದೆ. ಆದರೆ, ಬಜೆಟ್‍ನಲ್ಲಿ ಕೇವಲ 510 ಕೋಟಿ ಇಟ್ಟಿದ್ದು, ಇವರ ಉದ್ದೇಶ ಏನು ಎಂದು ಕೇಳಿದರು.

ಈ ವಿಷಯವನ್ನು ಸದನದೊಳಗೆ, ಸದನದ ಹೊರಗೆ ಪ್ರಶ್ನಿಸಲಿದ್ದೇವೆ. 25 ಸಾವಿರ ಕೋಟಿ ಹಣವನ್ನು ದುರುಪಯೋಗ ಮಾಡಿದ್ದು, ಸಿದ್ದರಾಮಯ್ಯ, ಮಹದೇವಪ್ಪನವರಿಗೆ ನಾಚಿಕೆ ಬೇಡವೇ? ಎಂದು ಕಿಡಿಕಾರಿದರು.

ಸಿಎಂ ಮೇಲೆ ಜೋಶಿ ಆರೋಪ:ವಾಲ್ಮೀಕಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿಯವರೂ ಇದ್ದಾರೆ. ನಾಗೇಂದ್ರ ಒಬ್ಬರೆ ಇಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. 40 ದಿನವಾದರೂ ಎಸ್‌ಐಟಿ ನಾಗೇಂದ್ರ ಮತ್ತು ದದ್ದಲ್‌ಗೆ ನೋಟಿಸ್ ಕೊಟ್ಟಿಲ್ಲ, ಅವರನ್ನು ವಿಚಾರಣೆಗೂ ಕರೆದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

2003-04 ರಲ್ಲಿ ಆ ಭೂಮಿ ಡಿನೋಟಿಫಿಕೇಶನ್ ಆಗಿತ್ತು ಎನ್ನಲಾಗಿದೆ. 2010 ರವರೆಗೆ ಆ ಭೂಮಿ ಮುಡಾ ಹೆಸರಿನಲ್ಲಿಯೇ ಇದೆ. 2010ರ ನಂತರ ಅನೇಕರಿಗೆ ಪ್ಲಾಟ್ ನೀಡಲಾಗಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ತಮ್ಮ ದಾನ ಕೊಟ್ಟಿದ್ದಾರೆ. ಮುಡಾ ಅಭಿವೃದ್ಧಿ ಪಡಿಸಿ ಪ್ಲಾಟ್ ನೀಡಿದೆ.‌ 2013 ರ ಚುನಾವಣೆಯಲ್ಲಿ ಅಪಡವಿಟ್​ನಲ್ಲಿ ಏಕೆ ಹಾಕಿಲ್ಲ. 2018 ರ ಚುನಾವಣೆಯಲ್ಲಿ ಅದನ್ನು 25 ಲಕ್ಷ ರೂಪಾಯಿ ಅಂತಾ ತೋರಿಸಿದ್ದಾರೆ. 2023 ರ ಚುನಾವಣೆಯಲ್ಲಿ ಅದನ್ನು 8.62 ಕೋಟಿ ಅಂತಾ ತೋರಿಸಿದ್ದಾರೆ. ಇದೀಗ 62 ಕೋಟಿ ರೂಪಾಯಿ ಅಂತಾ ಏಕೆ ಪರಿಹಾರ ಕೇಳುತ್ತಿದ್ದಾರೆ?. ಇಲ್ಲಿ ಪ್ಲಾಟ್ ಇದ್ದರೂ ವಿಜಯ ನಗರದಲ್ಲೇಕೆ ಪ್ಲಾಟ್ ತೆಗೆದುಕೊಂಡಿರಿ? ಎಂದು ಸಚಿವರು ಪ್ರಶ್ನಿಸಿದರು.

ಓದಿ:ಮುಡಾದಲ್ಲಿ ದೇವೇಗೌಡರ ಕುಟುಂಬಕ್ಕೆ 48 ನಿವೇಶನ, ಹೆಚ್​ಡಿಕೆಗೆ 60 ಸಾವಿರ ಚದರಡಿ ನಿವೇಶನ ಹಂಚಿಕೆ: ರಮೇಶ್ ಬಾಬು ಆರೋಪ - Muda Land Issue

ABOUT THE AUTHOR

...view details