ಬೆಂಗಳೂರು: ಬಿ ರಿಪೋರ್ಟ್ ಹಾಕುವ ಕೇಸ್ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಸರ್ಕಾರದ ನಡೆ ಅನುಮಾನ ಹುಟ್ಟು ಹಾಕಿದೆ. ಕಾಂಗ್ರೆಸ್ ಸರ್ಕಾರ ಇದನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿದೆ. ರಾಜಕೀಯ ದುರುದ್ದೇಶದಿಂದ ಕ್ರಮ ತೆಗೆದುಕೊಳ್ಳಲು ಬಂದರೆ ಅದು ಅವರಿಗೇ ತಿರುಗುಬಾಣವಾಗುತ್ತದೆ. ರಾಜಕೀಯವಾಗಿ ಲಾಭದ ಬದಲು ನಷ್ಟವನ್ನು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ನಾಯಕ ಸಿ.ಟಿ ರವಿ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ದೂರಿಗೆ ಸಂಬಂಧಿಸಿದಂತೆ ಸರ್ಕಾರದ ನಡೆ ಅನುಮಾನದಿಂದ ಕೂಡಿದೆ. ಮಾರ್ಚ್ 14 ರಂದು ಪೋಕ್ಸೋ ದೂರು ದಾಖಲಾಯಿತು. ಆ ಮಹಿಳೆ ಆರೋಪ ಮಾಡಿದ್ದು ಫೆ.02 ರಂದು. ಈ ಪ್ರಕರಣ ಸಂಬಂಧ ಏಪ್ರಿಲ್ 12 ರಂದು ಯಡಿಯೂರಪ್ಪ ಸಿಐಡಿ ಮುಂದೆ ಹಾಜರಾಗಿ ವಿವರಣೆ ಕೊಟ್ಟಿದ್ದಾರೆ. ಆದರೆ ಈಗ ಅವರ ವಿರುದ್ಧ ಅರೆಸ್ಟ್ ವಾರಂಟ್ ಕೊಟ್ಟಿದ್ದಾರೆ. ಇವತ್ತು ಹೈಕೋರ್ಟ್ನಲ್ಲಿ ಯಡಿಯೂರಪ್ಪ ನಿರೀಕ್ಷಣಾ ಜಾಮೀನಿನ ವಿಚಾರಣೆ ಇದೆ. ಆದರೆ ಈ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯ ದೃಷ್ಟಿಯಿಂದ ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಪರಕಾಯ ಪ್ರವೇಶ ಮಾಡಿದವರು ಯಾರು?:ಈ ಪ್ರಕರಣದಲ್ಲಿ ಪರಕಾಯ ಪ್ರವೇಶ ಮಾಡಿದವರು ಯಾರು?, ಇಷ್ಟು ದಿನ ಇಲ್ಲದ ವೇಗ ಮೂರು ತಿಂಗಳ ನಂತರ ಯಾಕೆ ಬಂತು?, 53 ಜನರ ವಿರುದ್ಧ ಆ ಮಹಿಳೆ ಇದೇ ಥರದ ದೂರು ಕೊಟ್ಟಿರೋ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದರು. ಆಕೆ ಮಾನಸಿಕ ಅಸ್ವಸ್ಥೆ ಅಂತಿದ್ದಾರೆ ಅಂತ ಆರೋಪ ಮಾಡಿದ್ದರು. ಗೃಹ ಸಚಿವರ ಅಂದಿನ ಹೇಳಿಕೆಗೂ ಇಂದಿನ ಹೇಳಿಕೆಗೂ ವ್ಯತ್ಯಾಸ ಇದೆ. ಬಿ ರಿಪೋರ್ಟ್ ಹಾಕುವಂತಹ ಕೇಸ್ನಲ್ಲಿ ಈಗ ಯಡಿಯೂರಪ್ಪ ಬಂಧನಕ್ಕೆ ಮುಂದಾಗಿದ್ದಾರೆ. ಇದರಲ್ಲಿ ಪರಕಾಯ ಪ್ರವೇಶ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆ ಸೋಲಿಗೆ ಈ ರೀತಿ ಮಾಡುತ್ತಿದ್ದಾರಾ?, ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಬಿಜೆಪಿ ಹೋರಾಟ, ಸಚಿವರ ರಾಜೀನಾಮೆಯಿಂದ ಕಾಂಗ್ರೆಸ್‌ನವರು ಹತಾಶೆಯಿಂದ ಹೀಗೆ ಮಾಡ್ತಿದ್ದಾರಾ?, 40% ಕಮೀಷನ್ ಕೇಸ್ನಲ್ಲಿ ರಾಹುಲ್ ಗಾಂಧಿ ಕೋರ್ಟ್ ಕಟಕಟೆಗೆ ಬಂದು ನಿಂತಿದ್ದರು. ಈ ಕಾರಣಕ್ಕೆ ಈ ರೀತಿ ಯಡಿಯೂರಪ್ಪ ಮೇಲೆ ರಾಜಕೀಯ ದುರುದ್ದೇಶದ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರಾ?, ಬಿಜೆಪಿ ಮತ್ತು ಯಡಿಯೂರಪ್ಪ ಅವರನ್ನು ಕುಗ್ಗಿಸಬಹುದು ಅಂತ ಈ ರೀತಿ ಮಾಡಿದ್ದಾರಾ?, ಇದೆಲ್ಲ ನೋಡಿದಾಗ ನಮಗೆ ಅನುಮಾನ ಬರುತ್ತದೆ.
ಪ್ರಭಾವಿ ಸಚಿವರೇ ಈ ಕೇಸ್ಗೆ ಮರುಜೀವ ನೀಡಿದರಾ?:ಒಬ್ಬ ಪ್ರಭಾವಿ ಸಚಿವರು ಈ ಕೇಸ್ಗೆ ಜೀವ ಕೊಡಲು ಕಾರಣರಾಗಿದ್ದಾರೆ ಅಂತ ನಮಗೆ ಮಾಹಿತಿ ಬಂದಿದೆ. ಇವತ್ತಿನ ನ್ಯಾಯಾಲಯದ ಆದೇಶ ಏನೇ ಬಂದರೂ ನಾವು ಸ್ವಾಗತಿಸುತ್ತೇವೆ. ಚುನಾವಣೆವರೆಗೂ ಸುಮ್ಮನಿದ್ದು, ಸೋಲಿನ ಬಳಿಕ ಕಾಂಗ್ರೆಸ್ ನಡೆ ಅನುಮಾನದಿಂದ ಕೂಡಿದೆ. ಯಡಿಯೂರಪ್ಪ ಜನರ ನಡುವೆಯೇ ಇದ್ದರು ಈ ಪ್ರಕರಣದಿಂದ ರಾಜಕೀಯ ಲಾಭ ಪಡೆಯಲು ಮುಂದಾದರೆ ಅದು ಕಾಂಗ್ರೆಸ್ಗೆ ಸಿಗಲ್ಲ. ಇದರಿಂದ ಕಾಂಗ್ರೆಸ್ಗೆ ರಾಜಕೀಯ ನಷ್ಟ ಆಗಲಿದೆ ಎಂದರು.