ಬೆಂಗಳೂರು: ವಿಧಾನಸೌಧದ ದ್ವಾರದ ಬಳಿ ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಬಂಧಿಸಬೇಕು. ಆ ಘಟನೆಯ ನೈತಿಕ ಹೊಣೆ ಹೊತ್ತು ಸರ್ಕಾರ ರಾಜೀನಾಮೆ ನೀಡಬೇಕೆಂದು ನಿನ್ನೆಯಿಂದ ನಡೆಸಿದ ಧರಣಿಯನ್ನು ವಿಧಾನಸಭೆಯಲ್ಲಿ ಇಂದೂ ಮುಂದುವರೆಸಿದ ಬಿಜೆಪಿ ಸದಸ್ಯರು, ಕಾಗದಪತ್ರಗಳನ್ನು ಹರಿದು ತೂರಿ ಸರ್ಕಾರದ ವಿರುದ್ಧ ಕೆಲಕಾಲ ಘೋಷಣೆಗಳನ್ನು ಕೂಗಿ ಸಭಾತ್ಯಾಗ ಮಾಡಿದರು. ಬೆಳಗ್ಗೆ ಸದನ ಸೇರುತ್ತಿದ್ದಂತೆಯೇ ವಿಪಕ್ಷಗಳ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ಧರಣಿ ಮುಂದುವರೆಸಿದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, "ಇಡೀ ಪ್ರಪಂಚವೇ ನಮ್ಮ ಕಡೆ ನೋಡುತ್ತಿದೆ. ಆದರೂ ದೇಶದ್ರೋಹಿಗಳ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಯಾರನ್ನೂ ಬಂಧಿಸಿಲ್ಲ. ಸರ್ಕಾರ ಮೌನವಾಗಿದೆ. ಹೀಗಾದರೆ ರಾಜ್ಯದ ಜನತೆಗೆ ಯಾವ ಸಂದೇಶ ರವಾನೆಯಾಗುತ್ತದೆ?. ರಕ್ಷಣೆ ಕೊಡಲಿ ಎಂಬ ಉದ್ದೇಶದಿಂದ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ವಿಧಾನಸೌಧ ಉಗ್ರರ ತಾಣವಾಗಲು ಬಿಡಬೇಕಾ?" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, "ಈ ವಿಚಾರದ ಬಗ್ಗೆ ನಿನ್ನೆ ಚರ್ಚೆಯಾಗಿದೆ. ಸರ್ಕಾರವು ಉತ್ತರ ಕೊಟ್ಟಿದೆ. ಘಟನೆ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಹೇಳಿದೆ. ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ. ಧರಣಿ ಕೈಬಿಟ್ಟು ಸುಗಮ ಕಲಾಪಕ್ಕೆ ಸಹಕಾರ ಕೊಡಬೇಕು" ಎಂದರು.
ಆಗ ಆರ್.ಅಶೋಕ್, "ಕೋಲಾರದಲ್ಲಿ ಈ ಹಿಂದೆ ದಲಿತರನ್ನು ಸುಟ್ಟು ಹಾಕಿದರು. ಆಗ ಗೃಹಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯಲ್ಲಿ ಕಣ್ಣೀರು ಹಾಕಿದರು. ಅದು ಅವರ ಕಳಕಳಿ. ಆದರೆ ಈ ಸರ್ಕಾರಕ್ಕೆ ಯಾವುದೇ ಜವಾಬ್ದಾರಿ ಇಲ್ಲ. ನೈತಿಕ ಹೊಣೆ ಹೊತ್ತಿಲ್ಲ" ಎಂದು ಆರೋಪಿಸಿದರು.
ಏಳು ಜನರಿಂದ ಹೇಳಿಕೆ ದಾಖಲು-ಗೃಹ ಸಚಿವ ಪರಮೇಶ್ವರ್: ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, "ಪ್ರತಿಪಕ್ಷದ ನಾಯಕರು ಪ್ರಸ್ತಾಪಿಸಿದ ವಿಚಾರದ ಬಗ್ಗೆ ನಿನ್ನೆ ಉತ್ತರ ನೀಡಲಾಗಿದೆ. ಆ ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಕರೆದು ವಿಚಾರ ಮಾಡಿ ಅವರ ಹೇಳಿಕೆ ಪಡೆಯಲಾಗಿದೆ. ತನಿಖೆ ಮುಂದುವರೆದಿದೆ. ಒಂದೊಂದು ಮಾಧ್ಯಮ ಒಂದೊಂದು ರೀತಿ ಹೇಳಿವೆ. ಅದರ ನೈಜತೆ ತಾಂತ್ರಿಕವಾಗಿ ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೇಳಲಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಒಂದು ವೇಳೆ ಆರೋಪಿಸಿದಂತೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದರು.