ಬೆಂಗಳೂರು: ವಿಧಾನಸಭೆಯ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ರಾಮನಗರದಲ್ಲಿ ವಕೀಲರ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿದರು. ಐಜೂರು ಠಾಣೆ ಪಿಎಸ್ಐ ಅಮಾನತು ಮಾಡುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
''ರಾಮನಗರ ಪ್ರಕ್ಷುಬ್ಧ ಆಗಿದೆ, ನಿನ್ನೆ ನಾನೂ, ಎಚ್ಡಿಕೆ ಹೋಗಿದ್ವಿ. ಚಾಂದ್‌ಪಾಷ ಅನ್ನೋ ವಕೀಲ ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಕೋರ್ಟ್ ಆದೇಶ ಮಾಡಿರುವ ಬಗ್ಗೆ ಟ್ವೀಟ್ನಲ್ಲಿ ಆ ಜಡ್ಜ್ಗೆ ಕೆಟ್ಟ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಹಿಂದೂಗಳು, ಬಿಜೆಪಿ ವಿರುದ್ಧವೂ ನಿಂದಿಸಿದ್ದಾರೆ. ಇಷ್ಟೆಲ್ಲ ಆದ ನಂತರ ಚಾಂದ್‌ಪಾಷ ವಿರುದ್ಧ ಜನ ಠಾಣೆಗೆ, ವಕೀಲರ ಸಂಘಕ್ಕೆ ದೂರು ಕೊಡ್ತಾರೆ. ವಕೀಲರ ಸಂಘದ ಸದಸ್ಯರು ಇದರ ಬಗ್ಗೆ ಚರ್ಚೆ ಮಾಡುವಾಗ ಕೆಲವರು ನುಗ್ಗಿ ವಕೀಲರಿಗೆ ಕೆಟ್ಟ ಪದಗಳಿಂದ ಬೈತಾರೆ. ಇದರ ವಿರುದ್ಧವೂ ವಕೀಲರು ಪೊಲೀಸರಿಗೆ ದೂರು ಕೊಡ್ತಾರೆ. ಆದ್ರೆ ಪೊಲೀಸರು ವಕೀಲರ ದೂರು ಪಡೆದು ಸುಮ್ಮನಾಗುತ್ತಾರೆ. ಯಾವುದೇ ಕ್ರಮಕ್ಕೆ ಮುಂದಾಗಿಲ್ಲ'' ಎಂದು ಅಶೋಕ್ ವಾಗ್ದಾಳಿ ನಡೆಸಿದರು.
''ನಂತರ ಚಾಂದ್‌ಪಾಷ ಕಡೆಯವರಿಂದಲೂ ಪೊಲೀಸರು ಒಂದು ದೂರು ತಗೋತಾರೆ. ವಕೀಲರೇ ಚಾಂದ್‌ಪಾಷ ಕಡೆಯವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ದೂರು ಕೊಡ್ತಾರೆ. ಪೊಲೀಸರು ತಕ್ಷಣ ಮೊದಲು ದೂರು ಕೊಟ್ಟ ವಕೀಲರ ವಿರುದ್ಧವೆ ಎಫ್‌ಐಆರ್ ಹಾಕ್ತಾರೆ. ಇದನ್ನು ಖಂಡಿಸಿ ವಕೀಲರು ಪ್ರತಿಭಟನೆಗೆ ಇಳಿದಿದ್ದಾರೆ. ಚಾಂದ್‌ಪಾಷ ಜ್ಞಾನವಾಪಿ ಮಸೀದಿ ಬಗ್ಗೆ ಆದೇಶಿಸಿ ಜಡ್ಜ್ ವಿರುದ್ಧ ಲೂಟಿ ಆರೋಪ ಮಾಡಿದ್ದಾರೆ. ವಕೀಲರ ಸಂಘದ ಚುನಾವಣೆಯಲ್ಲಿ ಗೆದ್ದವರಿಗೂ ಜಾತಿ ನಿಂದನೆ ಮಾಡಿದ್ದಾರೆ'' ಎಂದು ಆರ್ ಅಶೋಕ್ ಆರೋಪಿಸಿದರು.