ಬೆಂಗಳೂರು: ಬಿಜೆಪಿ ಬೆಂಬಲದೊಂದಿಗೆ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿರುವ ಜೆಡಿಎಸ್ ಗೆಲುವಿನ ತಂತ್ರಗಾರಿಕೆ ರೂಪಿಸುತ್ತಿದೆ. ಮಿತ್ರಪಕ್ಷ ಬಿಜೆಪಿ ಜೊತೆ ಸೇರಿ ಜಂಟಿ ಸಭೆ ನಡೆಸಿ ಚುನಾವಣಾ ಕಾರ್ಯತಂತ್ರದ ಕುರಿತು ಸಮಾಲೋಚನೆ ನಡೆಸಲಾಯಿತು. ಹೆಚ್ಚುವರಿ ಮತಗಳಿಕೆಯ ಅವಕಾಶಗಳ ಕುರಿತು ಚರ್ಚಿಸಲಾಯಿತು.
ರಾಜ್ಯಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಶುಕ್ರವಾರ ಬಿಜೆಪಿ - ಜೆಡಿಎಸ್ ನಾಯಕರ ಸಭೆ ನಡೆಯಿತು. ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಎನ್ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಭಾಗಿಯಾಗಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕುಪೇಂದ್ರ ರೆಡ್ಡಿ ಗೆಲುವಿನ ಲೆಕ್ಕಾಚಾರದ ಬಗ್ಗೆ ಮಾತುಕತೆ ನಡೆಸಲಾಯಿತು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ರಾಜ್ಯ ಬಜೆಟ್ ಮಂಡನೆ ನಂತರ ನಮ್ಮ ಶಾಸಕರು ಎಲ್ಲಾ ಸೇರಿದ್ದೆವು. ಮುಂದಿನ ವಾರ ಕಲಾಪದಲ್ಲಿ ನಮ್ಮ ನಡವಳಿಕೆ ಹೇಗಿರಬೇಕು ಎನ್ನುವ ಚರ್ಚೆಯಾಯಿತು. ಜೊತೆಗೆ ರಾಜ್ಯಸಭೆ ಚುನಾವಣೆಯಲ್ಲಿ ಒಟ್ಟಾಗಿ ಇರುವಂತೆ ಚರ್ಚೆ ಮಾಡಿದೆವು. ಎರಡನೇ ಅಭ್ಯರ್ಥಿ ಕುಪ್ಪೆಂದ್ರ ರೆಡ್ಡಿ ಇದ್ದಾರೆ. ಯಾವುದೇ ಪಕ್ಷ ಇರಲಿ ಶಾಸಕರು ನಮಗೆ ಆತ್ಮಸಾಕ್ಷಿಯ ಮತ ಹಾಕಲು ಮನವಿ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಎನ್ಡಿಎ ಮೈತ್ರಿಕೂಟದಿಂದ ಇಬ್ಬರು ಅಭ್ಯರ್ಥಿಗಳು ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ
ಇಲ್ಲಿ ಸಂಖ್ಯಾಬಲ ಮುಖ್ಯ ಅಲ್ಲ. ಈ ಹಿಂದೆ ನಮ್ಮಲ್ಲಿ ಏಳು ಜನ ಮತಾದಾನ ಮಾಡುವಾಗ ಕಾಂಗ್ರೆಸ್ ವಿರುದ್ಧ ಮತದಾನ ಮಾಡಿಸಿದ್ದರು. ಆಗ ನಾವು ಸೋಲುತ್ತೇವೆ ಎಂದು ಭಾವಿಸಿದ್ವಾ? ಕಳೆದ ಬಾರಿ ಕುಪ್ಪೆಂದ್ರ ರೆಡ್ಡಿ ಕೆಲವೇ ಅಂತರದಲ್ಲಿ ಸೋತರು, ಕಳೆದ ಬಾರಿ ನಮ್ಮಲ್ಲೇ ಒಬ್ಬ ನಾಟಕ ಮಾಡಿದ. ಮತ್ತೊಮ್ಮೆ ಓಪನ್ ಆಗಿ ಮತದಾನ ಮಾಡಿದ. ಈಗ ಗೆಲ್ಲೋದು ದೇವರ ಕೈಲಿ ಇದೆ. ಕಳೆದ ಬಾರಿ ಅಡ್ಡಮತದಾನ ಆಗಿದ್ದು, ನೋಡಿದ್ದೇವೆ. ಈ ಸರ್ಕಾರದ ಬಜೆಟ್ ನೋಡಿದಾಗ ಶಾಸಕರೆಲ್ಲಾ ಅತಂತ್ರವಾಗಿಯೆ ಇದ್ದಾರೆ. ಎಲ್ಲವನ್ನೂ ಕಾಲವೇ ನಿರ್ಧಾರ ಮಾಡಲಿದೆ. ನಮ್ಮಲ್ಲಿ ಯಾರು ಅಡ್ಡ ಮತದಾನ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ನಿಂದ ಮೂವರು, ಬಿಜೆಪಿಯಿಂದ ಓರ್ವ ಮತ್ತು ಐದನೇ ಅಭ್ಯರ್ಥಿಯಾಗಿ ಜೆಡಿಎಸ್ನಿಂದ ಒಬ್ಬರು ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಚುನಾವಣಾ ಅಭ್ಯರ್ಥಿಯಾಗಿ ಬಿಜೆಪಿಯ ನಾರಾಯಣಸಾ ಭಾಂಡಗೆ ಹಾಗೂ ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿ ಅವರು ನಾಮ ಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಕಾಂಗ್ರೆಸ್ನಿಂದ ಅಜಯ್ ಮಾಕೆನ್, ಜೆ.ಸಿ.ಚಂದ್ರಶೇಖರ್ ಹಾಗೂ ಡಾ.ಸೈಯದ್ ನಾಸಿರ್ ಹುಸೇನ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ನಿಂದ ಮೂವರು ನಾಮಪತ್ರ ಸಲ್ಲಿಕೆ