ಬೆಂಗಳೂರು: ನಾಳೆ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಭೆ ನಡೆಯಿತು.
ನಗರದ ಎಂ.ಜಿ. ರಸ್ತೆಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಭಾಗಿಯಾಗಿದ್ದರು. ಎನ್ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವಿನ ಕಾರ್ಯತಂತ್ರದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ, ನಮ್ಮ ಮತವನ್ನು ಯಾವ ರೀತಿ ಹಾಕಬೇಕೆಂದು ಚರ್ಚೆ ಆಗಿದೆ. ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಕುರಿತು ನಾಳೆ ನೋಡೋಣ ಎಂದು ಹೇಳಿದರು.
ನಂತರ ಎನ್ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮಾತನಾಡಿ, ಕಳೆದ ಬಾರಿ ನಾನು ಸೋತೆ. ಆಗಲೂ ನಾನು ಗೆಲ್ಲುವ ವಿಶ್ವಾಸದಲ್ಲಿದ್ದೆ. ಇಲ್ಲಿ ಸೋಲುತ್ತೇನೆ, ಗೆಲ್ಲುತ್ತೇನೆ ಅನ್ನೋದು ಮುಖ್ಯವಲ್ಲ. ನಾವು ನಮ್ಮ ಮತಗಳನ್ನು ಕ್ರೋಢೀಕರಣ ಮಾಡುತ್ತೇವಾ ಎನ್ನುವುದು ಮುಖ್ಯ. ಕ್ರೋಢೀಕರಣ ಯಾಕೆ ಅಂದರೆ ನಮ್ಮ ಮತಗಳು ಆಕಡೆ ಈಕಡೆ ಆಗಬಾರದು ಅನ್ನೋದು, ಕುಮಾರಸ್ವಾಮಿ ಕೂಡ ಇದನ್ನೇ ಹೇಳಿದ್ದಾರೆ. ಹಾಗಾಗಿ ನನಗೆ ವಿಶ್ವಾಸದ ಮತಗಳು ಬರುತ್ತವೆ ಎಂದು ಭರವಸೆ ಇದೆ ಎಂದರು.
ಕಾಂಗ್ರೆಸ್ ನಾಯಕರಿಂದ ಜೆಡಿಎಸ್ ಶಾಸಕರ ಸಂಪರ್ಕ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಇವೆಲ್ಲ ಊಹಾಪೋಹಗಳು. ಇಂದಿನ ಸಭೆಗೆ ಜೆಡಿಎಸ್ನ ಎಲ್ಲಾ ಶಾಸಕರು ಬಂದಿದ್ದರು. ನಾಳೆ ಬೆಳಗ್ಗೆ ಕೂಡ 8 ಗಂಟೆಗೆ ವಿಧಾನಸೌಧಕ್ಕೆ ಬರುತ್ತೇನೆ. ಶಾಸಕರೂ ಬರ್ತಾರೆ. ಆಮೇಲೆ ಎಲ್ಲರೂ ಒಟ್ಟಿಗೆ ಮತ ಹಾಕುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಅಡ್ಡ ಮತದಾನ ಮಾಡಿದ್ರೆ ಸ್ಪೀಕರ್ಗೆ ದೂರು, ಶಾಸಕ ಸ್ಥಾನದಿಂದ ವಜಾ : ಅಶೋಕ್ ಪಟ್ಟಣ್