ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಂಡಾಯ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ "ಶೋಕಾಸ್ ನೋಟಿಸ್" ಜಾರಿ ಮಾಡಿದೆ.
ಬಿಜೆಪಿ ಪಕ್ಷದ ಅನುಮತಿಯಿಲ್ಲದೇ ವಕ್ಫ್ ಭೂ ಅಕ್ರಮಗಳ ವಿರುದ್ಧ ರಾಜ್ಯದಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿರುವ ಯತ್ನಾಳ ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಭಿಯಾನದ ವೇಳೆ ಯತ್ನಾಳ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷರ ವಿರುದ್ಧ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷಕ್ಕೆ ಮುಜುಗರದ ಸನ್ನಿವೇಶ ಉಂಟು ಮಾಡಿತ್ತು.
ಯತ್ನಾಳಗೆ ಶೋಕಾಸ್ ನೋಟಿಸ್ (ETV Bharat) ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿಯು ಶಾಸಕ ಬಸನಗೌಡ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಿ ಹತ್ತು ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.
'ಪಕ್ಷದ ಹಿರಿಯ ಮುಖಂಡರಾದ ನೀವು ಬಿಜೆಪಿಯ ರಾಜ್ಯ ನಾಯಕತ್ವದ ವಿರುದ್ಧ ನೀಡುತ್ತಿರುವ ಹೇಳಿಕೆಗಳು ಆಕ್ಷೇಪಾರ್ಹವಾಗಿವೆ. ಈ ಹಿಂದೆ ನೀಡಿದ್ದ ಭರವಸೆಗಳನ್ನ ಮೀರಿ ಮತ್ತೆ ಬಿಜೆಪಿ ನಾಯಕತ್ವ ಟೀಕಿಸುತ್ತಿರುವುದು ಶಿಸ್ತು ಉಲಂಘನೆಗೆ ಕಾರಣವಾಗುತ್ತಿದೆ. ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು' ಎಂದು ಯತ್ನಾಳ್ಗೆ ನೀಡಲಾದ ಶೋಕಾಸ್ ನೋಟಿಸ್ನಲ್ಲಿ ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಕೇಳಿದ್ದಾರೆ.
ನೋಟಿಸ್ನಲ್ಲೇನಿದೆ?'ಪಕ್ಷದ ರಾಜ್ಯ ನಾಯಕತ್ವದ ವಿರುದ್ಧದ ಸಾರ್ವಜನಿಕ ಹೇಳಿಕೆಗಳು ಮತ್ತು ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪಕ್ಷದ ವಿವಿಧ ವೇದಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿಂದೆ ಕೂಡ ಹಲವು ಬಾರಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆಗ ನೀವು ಶಿಸ್ತು ಪಾಲಿಸುವುದಾಗಿ ಭರವಸೆ ನೀಡಿದರೂ ಈಗ ಅಶಿಸ್ತು ಮುಂದುವರಿದಿರುವುದು ಕಳವಳಕಾರಿಯಾಗಿದೆ. ನಿಮ್ಮ ಹಿರಿತನ ಮತ್ತು ಪಕ್ಷದ ಜೊತೆ ದೀರ್ಘಕಾಲ ನಿಂತಿರುವುದನ್ನು ಗಮನದಲ್ಲಿಟ್ಟುಕೊಂಡು ನೀವು ಹಿಂದೆ ಸಲ್ಲಿಸಿದ ವಿವರಣೆಯ ಬಗ್ಗೆ ಕೇಂದ್ರ ಶಿಸ್ತು ಸಮಿತಿ ಮೃದುವಾದ ಧೋರಣೆ ತೆಗೆದುಕೊಂಡಿತ್ತು. ಪಕ್ಷದ ನಾಯಕರ ಬಗ್ಗೆ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಸಾರ್ವಜನಿಕವಾಗಿ ಮಾಡುತ್ತಿರುವುದು ಪಕ್ಷದ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ 10 ದಿನದೊಳಗೆ ವಿವರಣೆ ಸಲ್ಲಿಸುವಂತೆ' ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ನಲ್ಲಿ ಸೂಚಿಸಲಾಗಿದೆ.
ನೋಟಿಸ್ಗೆ ಯತ್ನಾಳ್ ಪ್ರತಿಕ್ರಿಯೆ:ಈ ನೋಟಿಸ್ಗೆ ನಾನು ಉತ್ತರಿಸುತ್ತೇನೆ. ಜೊತೆಗೆ ರಾಜ್ಯ ಬಿಜೆಪಿಯಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ಕೂಡ ವಿವರಿಸುತ್ತೇನೆ. ಹಿಂದುತ್ವ, ಭ್ರಷ್ಟಾಚಾರ, ವಕ್ಪ್ ವಿಚಾರ, ಕುಟುಂಬ ರಾಜಕಾರಣದ ಬಗೆಗಿನ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಯತ್ನಾಳ್ ತಂಡದಿಂದ ವಕ್ಫ್ ಜನಜಾಗೃತಿ ಸಮಾವೇಶ; ವಿಜಯೇಂದ್ರ ವಿರುದ್ಧ ಗುಡುಗು