ಕರ್ನಾಟಕ

karnataka

ETV Bharat / state

ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಯಿಂದ ಸತತ ಪ್ರಯತ್ನ: ಸಚಿವ ಜಿ.ಪರಮೇಶ್ವರ್

ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಆಮಿಷವೊಡ್ಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿರುವ ಕುರಿತು, ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಸಚಿವ ಜಿ.ಪರಮೇಶ್ವರ್
ಸಚಿವ ಜಿ.ಪರಮೇಶ್ವರ್ (ETV Bharat)

By ETV Bharat Karnataka Team

Published : Nov 14, 2024, 11:58 AM IST

ಬೆಂಗಳೂರು: ಬಿಜೆಪಿಯವರು ಈ ಸರ್ಕಾರವನ್ನು ಅಸ್ಥಿರಗೊಳಿಸಲು ಸತತವಾಗಿ ಸಾಕಷ್ಟು ಪ್ರಯತ್ನ ಮಾಡ್ತಿದ್ದಾರೆ. ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಅಂತ ಗೊತ್ತಿದ್ದರೂ ಆಮಿಷ ನೀಡುತ್ತಿದ್ದಾರೆ ಎಂದು ಸಚಿವ ಜಿ.ಪರಮೇಶ್ವರ್ ಹೇಳಿದರು.

ಬಿಜೆಪಿಯಿಂದ ಕಾಂಗ್ರೆಸ್​​ನ 50 ಶಾಸಕರಿಗೆ ತಲಾ 50 ಕೋಟಿ ರೂ ಆಮಿಷ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಸದಾಶಿವನಗರ ನಿವಾಸದ ಬಳಿ ಇಂದು ಗೃಹ ಸಚಿವರು ಪ್ರತಿಕ್ರಿಯಿಸಿದರು.

ಸಚಿವ ಜಿ.ಪರಮೇಶ್ವರ್ (ETV Bharat)

ಮುಖ್ಯಮಂತ್ರಿಗಳು ಒಂದಿಷ್ಟು ಮಾಹಿತಿ ಇಟ್ಕೊಂಡೇ ಆ ಹೇಳಿಕೆ ಕೊಟ್ಟಿದ್ದಾರೆ. ಅವರ ಆರೋಪದಲ್ಲಿ ಅರ್ಥವಿದೆ. ಬಿಜೆಪಿ, ಜೆಡಿಎಸ್​ನವರು ಸರ್ಕಾರ ಅಸ್ಥಿರಗೊಳಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿಯೇ ನಮ್ಮ ಶಾಸಕರಿಗೆ ಆಮಿಷವೊಡ್ಡುವ ಪ್ರಯತ್ನ ಮಾಡ್ತಿದ್ದಾರೆ. ಅದು ಸಾಧ್ಯವಿಲ್ಲ ಅಂತ ಗೊತ್ತಿದ್ದರೂ ಮುಂದುವರಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಹೀಗೇ ಆಮಿಷವೊಡ್ಡಿ ಸರ್ಕಾರ ಮಾಡಿದ್ರು ಎಂದು ಆರೋಪಿಸಿದರು.

ಬಿಜೆಪಿಯವರ ಆಮಿಷದಿಂದ ನಮಗೆ ಯಾವುದೇ ಆತಂಕ ಇಲ್ಲ, ನಮ್ಮ ಸರ್ಕಾರ ಸುಭದ್ರವಾಗಿದೆ. ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಜೆಡಿಎಸ್ ಎಲ್ಲ ಪ್ರಯತ್ನ ಮಾಡ್ತಿದ್ದಾರೆ. ಶಾಸಕರಿಗೆ ಆಮಿಷ ತೋರಿಸೋದು ಬಿಜೆಪಿಯವರಿಗೆ ಅಭ್ಯಾಸವಾಗಿ ಹೋಗಿದೆ. ನಾವು ಸರ್ಕಾರ ಕೆಡವಲು, ಅಸ್ಥಿರಗೊಳಿಸಲು ಬಿಡೋದಿಲ್ಲ, ನಾವು ಇದನ್ನು ಎದುರಿಸ್ತೇವೆ. ಜನಾದೇಶ ನಮ್ಮ ಪರವಾಗಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದರು.

ಜನ ಎಲ್ಲವನ್ನೂ ಗಮನಿಸಿ ತೀರ್ಮಾನಿಸುತ್ತಾರೆ. ಅಷ್ಟು ಸುಲಭವಾಗಿ ಜನ ಒಪ್ಪಿಕೊಳ್ಳಲ್ಲ, ಅವರನ್ನು ತಿರಸ್ಕರಿಸುತ್ತಾರೆ. ನಾವೂ ಕೂಡ ಜನರ ಮುಂದೆ ಎಲ್ಲವನ್ನೂ ತೆಗೆದುಕೊಂಡು ಹೋಗುತ್ತೇವೆ ಎಂದು ಗೃಹ ಸಚಿವರು ಉತ್ತರಿಸಿದರು.

ಯುಪಿ ರಾಜ್ಯದ ಬುಲ್ಡೋಜರ್ ನ್ಯಾಯಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ ವಿಚಾರವಾಗಿ ಮಾತನಾಡಿ, ಯುಪಿ‌ ರಾಜ್ಯದ ನಡೆ ಜನಪರ ಇಲ್ಲ ಅಂತ ಕೋರ್ಟ್​ಗೆ ಮನವರಿಕೆ ಆಗಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ರಾಜ್ಯದ ವಿರುದ್ಧ ತೀರ್ಪು ಕೊಟ್ಟಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಒಳ‌ಮೀಸಲಾತಿ‌ ನಿಗದಿಗೆ ಏಕಸದಸ್ಯ ಆಯೋಗ ನೇಮಕ ಮಾಡಿದ್ದಾರೆ, ಇದು ಒಳ್ಳೆಯ ಬೆಳವಣಿಗೆ. ಒಳಮೀಸಲಾತಿಗೆ ಎಂಪೆರಿಕಲ್ ಡೇಟಾ ತೆಗೆದುಕೊಂಡು ಆಯೋಗ ಮಾಡ್ತಾರೆ. ಎಷ್ಟು ಪ್ರಮಾಣದ ಮೀಸಲಾತಿಗೆ ನಿಗದಿ‌ ಮಾಡ್ತಾರೋ ಗೊತ್ತಿಲ್ಲ. ಆಯೋಗ ಏನು ವರದಿ ಕೊಡುತ್ತದೆಯೋ ಕಾದು ನೋಡಬೇಕು ಎಂದರು.

ಈವರೆಗೆ ರಾಜ್ಯದಲ್ಲಿ ಸ್ವಂತ ಶಕ್ತಿಯಿಂದ ಒಂದು ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಮಾತ್ರ ಅವರು ಅಧಿಕಾರಕ್ಕೆ ಬಂದಿದ್ದಾರೆ. ಈ ಸಲವೂ ಕಾಂಗ್ರೆಸ್​​ನ 50 ಮಂದಿ ಶಾಸಕರಿಗೆ ತಲಾ 50 ಕೋಟಿ ರೂ ಆಫರ್ ನೀಡಿ ಖರೀದಿಸಲು ಯತ್ನಿಸಿದ್ದರು. ಆದರೆ ನಮ್ಮ ಶಾಸಕರು ಆಮಿಷಕ್ಕೆ ಒಳಗಾಗಲಿಲ್ಲ ಎಂದು ಬುಧವಾರ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ:ಬಿಜೆಪಿಯಿಂದ ಕಾಂಗ್ರೆಸ್​ನ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details