ಬೆಂಗಳೂರು:ಕರ್ನಾಟಕದಲ್ಲಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಅಗತ್ಯತೆ ಮತ್ತು ಪ್ರವಾಸೋದ್ಯಮಕ್ಕೆ ವಿಶೇಷ ಗಮನ ನೀಡಬೇಕು ಎಂದು ಬಿಜೆಪಿ ಸಂಕಲ್ಪ ಪತ್ರಕ್ಕೆ ಉದ್ಯಮಿಗಳು ಸಲಹೆ ನೀಡಿದ್ದು, ಸಬ್ ಕಾ ವಿಶ್ವಾಸ್ ರೀತಿಯ ಯೋಜನೆಗಳ ಅಗತ್ಯತೆಯನ್ನು ಪ್ರಸ್ತಾಪಿಸಿದರು.
ಎಫ್‍ಕೆಸಿಸಿಐ ಮತ್ತು ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಹಯೋಗದಲ್ಲಿ ಬುಧವಾರ ವ್ಯಾಪಾರ, ಉದ್ಯಮ ಮತ್ತು ವೃತ್ತಿಪರರಿಂದ 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯ 'ಸಂಕಲ್ಪ ಪತ್ರ'ಕ್ಕಾಗಿ (ಪ್ರಣಾಳಿಕೆ) ಸಲಹೆಗಳನ್ನು ಆಹ್ವಾನಿಸುವ ಸಂವಾದ ಸಭೆ ನಡೆಸಲಾಯಿತು.
ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಸಣ್ಣ ಮತ್ತು ಅತೀ ಸಣ್ಣ ಉದ್ಯಮ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮುಖ್ಯ ಸಲಹೆಗಳನ್ನು ಸ್ವೀಕರಿಸಲಾಯಿತು. ಎಂಎಸ್‍ಎಂಇಗಳಿಗೆ ನಿರ್ಗಮನ ನೀತಿ ಮತ್ತು ಎಂಎಸ್‍ಎಂಇಗಳ ಬೆಳವಣಿಗೆಗೆ ತಂತ್ರಜ್ಞಾನದ ಮಧ್ಯಸ್ಥಿಕೆಯ ಅಗತ್ಯಕ್ಕೆ ಸಂಬಂಧಿಸಿ ಉದ್ಯಮಿಗಳು ಸಲಹೆಗಳನ್ನು ನೀಡಿದರು.
ಇದನ್ನೂ ಓದಿ:ನೀತಿ ಸಂಹಿತೆ ಉಲ್ಲಂಘನೆ ಆರೋಪ: ಶೋಭಾ ಕರಂದ್ಲಾಜೆ ವಿರುದ್ಧ ತಕ್ಷಣವೇ ಕ್ರಮಕ್ಕೆ ಚುನಾವಣಾ ಆಯೋಗದ ಸೂಚನೆ
ತೆರಿಗೆಗೆ ಸಂಬಂಧಿಸಿದ ಸಮಸ್ಯೆಗಳೆಂದರೆ, ಆದಾಯ ತೆರಿಗೆ ಮತ್ತು ಜಿಎಸ್‍ಟಿ, ಜಿಎಸ್‍ಟಿ ಸ್ಲ್ಯಾಬ್‍ಗಳನ್ನು ತರ್ಕಬದ್ಧಗೊಳಿಸುವಿಕೆ, ಜಿಎಸ್‍ಟಿಯಲ್ಲಿ ಮರುಪಾವತಿಯ ಯಾಂತ್ರೀಕೃತಗೊಳಿಸುವಿಕೆ ಮತ್ತು ಪೆಟ್ರೋಲ್, ಡೀಸೆಲ್‍ಗಳನ್ನು ಜಿಎಸ್‍ಟಿಯ ವ್ಯಾಪ್ತಿಯಲ್ಲಿ ತರಬೇಕಾದ ಅಗತ್ಯತೆಗಳ ಕುರಿತು ಸಲಹೆಗಳನ್ನು ಸ್ವೀಕರಿಸಲಾಗಿದೆ.
ಆದಾಯ ತೆರಿಗೆ ಅಡಿಯಲ್ಲಿ, ಎಂಎಸ್‍ಎಂಇ ವಲಯದ ಮೇಲೆ ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 43ಬಿಹೆಚ್ ಪ್ರಭಾವದ ಸಂಬಂಧ ಒತ್ತು ನೀಡಲಾಗಿತ್ತು. ಸೆಕ್ಷನ್ 43 ಬಿಹೆಚ್‍ನಿಂದಾಗಿ ಉಂಟಾಗುವ ಅನಾನುಕೂಲಗಳ ಬಗ್ಗೆ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದರು.
ಎಫ್‍ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಮತ್ತು ಎಫ್‍ಕೆಸಿಸಿಐನ ಇತರ ಪದಾಧಿಕಾರಿಗಳು, ಬೆಂಗಳೂರು ಕೇಂದ್ರದ ಸಂಸದ ಪಿ.ಸಿ.ಮೋಹನ್, ಎಂಎಲ್‍ಸಿ ಗೋಪಿನಾಥ್ ರೆಡ್ಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ರಾಜ್ಯ ಪ್ರಕೋಷ್ಠಗಳ ಸಂಚಾಲಕ ದತ್ತಾತ್ರಿ, ಬಿಜೆಪಿ ರಾಜ್ಯ ಆರ್ಥಿಕ ಪ್ರಕೋಷ್ಠದ ಸಂಚಾಲಕ ಪ್ರಶಾಂತ್ ಜಿ.ಎಸ್., ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿಗೌಡ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: 'ಯಾರೋ ನೋಡಿಕೊಂಡು ಬಂದ ಹೆಣ್ಣನ್ನು ನಾನು ಮದುವೆಯಾಗುವುದಿಲ್ಲ'