ರಾಯಚೂರು: "ಬೆಳಗಾವಿಯಲ್ಲಿ ನಾಳೆಯಿಂದ ಅಧಿವೇಶನವಿದೆ. ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲವೆಂದು" ಕೃಷಿ ಸಚಿವ ಚಲುವರಾಯಸ್ವಾಮಿ ಟೀಕಿಸಿದರು.
ನಗರದ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳಕ್ಕೆ ಭಾಗವಹಿಸಲು ತೆರಳುವ ಮುನ್ನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕೃಷಿ ಸಚಿವ ಚಲುವರಾಯಸ್ವಾಮಿ ಮಾಧ್ಯಮ ಪ್ರತಿಕ್ರಿಯೆ (ETV Bharat) "ಕಳೆದ ಐದು ವರ್ಷದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಅವರು ಏನು ಮಾಡಿದರು" ಎಂದು ಪ್ರಶ್ನಿಸಿದರು. ಮುಡಾ ಸೇರಿ ಸಣ್ಣ ವಿಷಯಗಳನ್ನು ಇಟ್ಟುಕೊಂಡು ಇವಾಗ ಚರ್ಚೆ ಯಾಕೆ ಮಾಡುತ್ತಾರೆ?, ಅಧಿವೇಶನ ಹಾಳು ಮಾಡುವ ಕೆಲಸ ಮಾಡಬಾರದು. ಯೋಜನೆಗಳ ಬಗ್ಗೆ ಕೇಳಲಿ ಅವರಿಗೆ ಉತ್ತರ ಕೊಡುತ್ತೇವೆ. ಮುಡಾ ತನಿಖೆ ಕೋರ್ಟ್‌ನಲ್ಲಿದೆ, ಈಗ ಏನು ಚರ್ಚೆ ಮಾಡುತ್ತಾರೆ" ಎಂದು ಪ್ರಶ್ನಿಸಿದರು.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯತ್ನಾಳ್ ಅವರು ಏನು ಮಾತಾಡುತ್ತಾರೋ.., ಅವರಿಗೆ ಪುರಸೊತ್ತಿಲ್ಲ. ಒಂದೆಡೆ ಅವರದೇ ಪಕ್ಷದ ವಿರುದ್ಧ ಹೋರಾಟ ಮಾಡುತ್ತಾರೆ. ಇನ್ನೊಂದೆಡೆ ವಕ್ಫ್ ವಿರುದ್ಧ ಹೋರಾಟ ಅಂತಾರೆ. ಬಿಜೆಪಿಯವರ ಕಾಲದಲ್ಲಿ ಹೆಚ್ಚು ನೋಟಿಸ್ ಕೊಡಲಾಗಿದೆ. 2,500 ನೋಟಿಸ್ ಕೊಡಲಾಗಿದೆ. ನಮ್ಮ ಸಿಎಂ ವಕ್ಫ್ ನೋಟಿಸ್ ಕೊಡುವುದು ನಿಲ್ಲಿಸಿ ಅಂತಾ ಹೇಳಿದ್ದಾರೆ, ವಕ್ಫ್ ಸಚಿವರಿಗೆ ತಿಳಿಸಿದ್ದಾರೆ. ಈ ಬಾರಿ ಒಳ್ಳೆಯ ಮಳೆಯಾಗಿದೆ, ಒಳ್ಳೆ ಇಳುವರಿ ಬಂದಿದೆ. ಹವಾಮಾನ ವೈಪರೀತ್ಯಗಳಿಂದ ಬೆಳೆ ಸ್ವಲ್ಪ ಹಾಳಾಗಿದೆ" ಎಂದರು.
ತೊಗರಿ ಜಿಆರ್ಜಿ 152 ಬೀಜ ಕಳಪೆ ಹಿನ್ನೆಲೆ, "ಈ ಬಗ್ಗೆ ಸಂಪೂರ್ಣ ಟೆಸ್ಟ್ ಮಾಡಿದ್ದೇವೆ. ನಾವು ವಿತರಿಸಿದ ಸೀಡ್ಸ್ನಿಂದ ಯಾವುದೇ ತೊಂದರೆ ಇಲ್ಲ. ವಿಜ್ಞಾನಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ" ಎಂದು ಸಚಿವರು ಸ್ಪಷ್ಟನೆ ನೀಡಿದರು.
ಮುಂದುವರೆದು, "ಜೆಡಿಎಸ್ನವರ ಮಂಡ್ಯ ಸಮಾವೇಶ ವಿಚಾರಕ್ಕೆ "ಇತ್ತೀಚೆಗೆ ಅವರು ಚುನಾವಣೆ ಸೋತಿದ್ದಾರೆ. ಒಬ್ಬರು ಇದನ್ನು ಕೌಂಟರ್ ಅಂತಾರೆ. ಒಬ್ಬರು ನಿಖಿಲ್ ಹುಟ್ಟಿದಹಬ್ಬ ಅಂತಾರೆ. ಒಬ್ಬರು ಕೇಂದ್ರಮಂತ್ರಿಯಾಗಿರೋದಕ್ಕೆ ಸನ್ಮಾನ ಅಂತಾರೆ. ಮಂಡ್ಯ ನಮ್ಮ ಭದ್ರಕೋಟೆ ಅಂತಾ ಪರಿಗಣಿಸಿಲ್ಲ. ಜನ ಯಾರ ಪರ ಇರ್ತಾರೆ ಅದು ಅವರ ಭದ್ರಕೋಟೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಮಾವೇಶ ಮಾಡಲಿ ಬಿಡಿ. ಮೂರು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ" ಎಂದು ಟಾಂಗ್ ನೀಡಿದರು.
ಪರಮೇಶ್ವರ ಸಿಎಂ, ಡಿಸಿಎಂ ಮೇಲೆ ಗರಂ ವಿಚಾರ: "ನಮ್ಮ ಹೈಕಮಾಂಡ್ ಎಲ್ಲಾ ತೀರ್ಮಾನ ಕೈಗೊಳ್ಳುತ್ತೆ. ಸಿಎಂ ರೇಸ್ನಲ್ಲಿ ನಮ್ಮವರು ಯಾರೂ ಇಲ್ಲ. ನಮ್ಮಲ್ಲಿ ಸಿಎಂ ಯಾರಾಗಬೇಕು ಅಂತಾ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಮ್ಮ ಪಕ್ಷದ ಬಗ್ಗೆ ಬಿ. ವೈ. ವಿಜಯೇಂದ್ರ, ಆರ್. ಅಶೋಕ್ ತೀರ್ಮಾನ ಮಾಡಲ್ಲ. ನಮ್ಮ ಪಾರ್ಟಿಯಲ್ಲಿ ಒಂದು ವ್ಯವಸ್ಥೆಯಿದೆ. ಯಾರೋ ಮಾತನಾಡಿದರು ಅಂತಾ ಉತ್ತರ ಕೊಡಲ್ಲ. ನಮ್ಮ ಎಐಸಿಸಿ ಎಲ್ಲಾ ತೀರ್ಮಾನ ಮಾಡುತ್ತೆ" ಎಂದು ತಿಳಿಸಿದರು.
ಇದನ್ನೂ ಓದಿ;ನಾಳೆಯಿಂದ ಬೆಳಗಾವಿ ಅಧಿವೇಶನ: ಒಳಜಗಳದಿಂದ ನಲುಗಿದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರದ ವಿರುದ್ಧ ಮುಗಿಬೀಳುವುದೇ?