ಬೆಂಗಳೂರು:ಮಾಜಿ ಸಚಿವ, ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಮ್ಮ ಮತವನ್ನು ತಮಗೆ ಚಲಾಯಿಸುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ತುಮಕೂರು ಟಿಕೆಟ್ ಸಿಕ್ಕ ಹಿನ್ನೆಲೆ ಅಲ್ಲಿನ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಸ್ವಕ್ಷೇತ್ರ ಗೋವಿಂದರಾಜನಗರದಲ್ಲಿ ಮತದಾನ ಮಾಡಿದರು. ಬೆಳಗ್ಗೆಯೇ ಬೆಂಗಳೂರಿನ ಗೋವಿಂದರಾಜನಗರದ ಆರೋಗ್ಯ ಕೇಂದ್ರದ ಮತಗಟ್ಟೆಗೆ ಆಗಮಿಸಿದ ವಿ.ಸೋಮಣ್ಣ ಮತ ಚಲಾಯಿಸಿದರು.
ಸರದಿ ಸಾಲಿನಲ್ಲಿ ನಿಂತು ಮತಗಟ್ಟೆ ಪ್ರವೇಶಿಸಿ ತಮ್ಮ ಗುರುತು ಪತ್ರವನ್ನು ಹಾಜರುಪಡಿಸಿದ ಸೋಮಣ್ಣ, ತಮ್ಮ ಹಕ್ಕು ಚಲಾವಣೆ ಮಾಡಿದರು. ನಂತರ ಮಾತನಾಡಿದ ಸೋಮಣ್ಣ, ಮೋದಿ ಕನಸು ನನಸು ಮಾಡಲು ಮತದಾನದ ಬೃಹತ್ ಕಾರ್ಯಕ್ರಮದಲ್ಲಿ ಸಂತೋಷದಿಂದ ಭಾಗಿಯಾಗಿದ್ದಾಗಿ ತಿಳಿಸಿದರು.