ಮೈಸೂರು:ವಿಧಾನಪರಿಷತ್ ಚುನಾವಣೆಯ ನೈರುತ್ಯ ಪದವೀಧರರ ಕ್ಷೇತ್ರದ ಮತ ಏಣಿಕೆ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಡಾ.ಧನಂಜಯ್ ಸರ್ಜಿ ಅವರು ಭರ್ಜರಿ ಜಯಭೇರಿ ಬಾರಿಸಿದ್ದಾರೆ.
37,627 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ಗೆ 13,516 ಮತ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಕೇವಲ 7,039 ಮತಗಳನ್ನು ಪಡೆದು ಮೂರನೇ ಸ್ಥಾನ ಗಳಿಸಿದ್ದಾರೆ.
30692+1 ಕೋಟಾ ನಿಗದಿಯಾಗಿದ್ದು, 5115 ಕುಲಗೆಟ್ಟ ಮತಗಳು ಎಂದು ಪರಿಗಣಿಸಲಾಗಿದೆ. ನಿಗದಿತ ಕೋಟಾಗಿಂತ 6,935 ಹೆಚ್ಚುವರಿ ಮತಗಳು ಡಾ.ಧನಂಜಯ್ ಸರ್ಜಿ ಅವರಿಗೆ ಲಭಿಸಿವೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಅವರು ಗೆಲುವು ಸಾಧಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ಗೆ ಮತ್ತೊಮ್ಮೆ ತೀವ್ರ ಮುಖಭಂಗ ಉಂಟಾಗಿದೆ. ಈಗಾಗಲೇ ಬಿಜೆಪಿ ಮಿತ್ರ ಪಕ್ಷ ಜೆಡಿಎಸ್ ತನ್ನ ಪಾಲಿನ ಎರಡೂ ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಪರಿಷತ್ ಚುನಾವಣೆಯ ಇತಿಹಾಸದಲ್ಲಿ ಮೊದಲ ಪ್ರಾಶಸ್ತ್ಯ ಮತದಲ್ಲಿ ಜಯ ಸಾಧಿಸಿದ ಮೊದಲ ಅಭ್ಯರ್ಥಿ ಎಂಬ ದಾಖಲೆಯನ್ನೂ ಇವರು ಬರೆದಿದ್ದಾರೆ.
ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಭೋಜೇಗೌಡ ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯದ ಮತದಲ್ಲೇ 5,267 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ 4,562 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಶಿವಮೊಗ್ಗ, ಉಡುಪಿ, ಜಿಲ್ಲೆಗಳ ವ್ಯಾಪ್ತಿಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತಿನ ಈ ಚುನಾವಣೆಯಲ್ಲಿ ಒಟ್ಟು 19,479 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 821 ಮತಗಳು ಅಸಿಂಧುಗೊಂಡಿದ್ದವು. 18,658 ಸಿಂಧು ಮತಗಳ ಪೈಕಿ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಭೋಜೇಗೌಡ 9,829 ಮತ ಗಳಿಸಿ ಗೆಲುವಿನ ನಗೆ ಬೀರಿದರು.
ಇದನ್ನೂ ಓದಿ:ನೈರುತ್ಯ ಶಿಕ್ಷಕರ ಕ್ಷೇತ್ರ: ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಭೋಜೇಗೌಡಗೆ ಭರ್ಜರಿ ಗೆಲುವು - MLC Election Results