ಕರ್ನಾಟಕ

karnataka

ETV Bharat / state

ಬೆಳಗಾವಿ ಕಾಂಗ್ರೆಸ್‌ ಸಮಾವೇಶಕ್ಕೆ ವಿರೋಧ: ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ನಾಳೆ ಬಿಜೆಪಿ ಪ್ರತಿಭಟನೆ - BELAGAVI CONGRESS SAMAVESH

ನಕಲಿ ಗಾಂಧಿಗಳು ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿ ಈಗ ಬೆಳಗಾವಿಯಲ್ಲಿ ಸರ್ಕಾರದ ಹಣದಲ್ಲಿ ಪಕ್ಷದ ಸಮಾವೇಶ ಮಾಡುತ್ತಿದ್ದಾರೆ ಎಂದು ಬಿಜೆಪಿ ಖಂಡಿಸಿದೆ. ನಾಳೆ ವಿಧಾನಸೌಧದ ಮುಂದೆ ಪ್ರತಿಭಟನೆಗೆ ಕರೆ ನೀಡಿದೆ.

ಬೆಳಗಾವಿ ಕಾಂಗ್ರೆಸ್‌ ಸಮಾವೇಶ, ಬಿಜೆಪಿ,Belagavi Congress Samavesh
ಆರ್‌.ಅಶೋಕ್, ಬಿವೈ ವಿಜಯೇಂದ್ರ (ETV Bharat)

By ETV Bharat Karnataka Team

Published : Dec 26, 2024, 6:19 PM IST

ಬೆಂಗಳೂರು: ಸರ್ಕಾರದ ಹಣವನ್ನು ಬಳಸಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಸರ್ಕಾರ ತನ್ನ ಪಕ್ಷದ ಸಮಾವೇಶ ಮಾಡುತ್ತಿರುವುದು ಖಂಡನೀಯ. ಇದರ ವಿರುದ್ಧ ವಿಧಾನಸೌಧ ಮುಂಭಾಗ ಶುಕ್ರವಾರ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಹೇಳಿದರು.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತ ನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ನಕಲಿ ಗಾಂಧಿಗಳು ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿ ಈಗ ಬೆಳಗಾವಿಯಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಗಾಂಧೀಜಿ ಬಹಳ ಸರಳವಾಗಿದ್ದರು. ಆದರೆ ಕಾಂಗ್ರೆಸ್‌ ನಾಯಕರು ಆಡಂಬರದ ಬದುಕು ನಡೆಸುತ್ತಿದ್ದಾರೆ. ಪ್ರಧಾನಿ, ಗೃಹ ಸಚಿವರು, ಹೆಚ್‌.ಡಿ.ಕುಮಾರಸ್ವಾಮಿ, ಸಂಸದರು, ಯಾರನ್ನೂ ಆಹ್ವಾನಿಸದೇ ಕಾಂಗ್ರೆಸ್‌ ಪಕ್ಷದ ನಾಯಕರನ್ನು ಮಾತ್ರ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮವಲ್ಲ, ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ ಎಂದು ದೂರಿದರು.

ಇದು ಕಾಂಗ್ರೆಸ್‌ನ ಕಾರ್ಯಕ್ರಮವಾಗಿರುವುದರಿಂದ ನಾವ್ಯಾರೂ ಹೋಗುವುದಿಲ್ಲ. ವಿಧಾನಸೌಧ ಮುಂಭಾಗದ ಗಾಂಧಿ ಪ್ರತಿಮೆಗೆ ನಾವೆಲ್ಲರೂ ಪುಷ್ಪ ನಮನ ಸಲ್ಲಿಸಲಿದ್ದೇವೆ. ಕಾಂಗ್ರೆಸ್‌ನವರು ಅಖಂಡ ಭಾರತ ಒಡೆದು ಹಾಕಿದ್ದರು. ನಾವು ಅಖಂಡ ಭಾರತದ ಚಿತ್ರ ತೋರಿಸಿದರೆ, ಕಾಂಗ್ರೆಸ್‌ನವರು ಜಮ್ಮು-ಕಾಶ್ಮೀರ ಇಲ್ಲದ ಭಾರತದ ಚಿತ್ರ ತೋರಿಸುತ್ತಿದ್ದಾರೆ. ಭಾರತದ ಭೂಪಟವನ್ನೇ ಛಿದ್ರ ಮಾಡಿರುವುದು ಖಂಡನೀಯ. ಕಾಂಗ್ರೆಸ್‌ ಇಡೀ ದೇಶವನ್ನು ಒಡೆಯುವ ಮನಸ್ಥಿತಿ ಹೊಂದಿದೆ ಎಂದು ಆರ್​ ಅಶೋಕ್​ ಆರೋಪಿಸಿದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಎಂದೂ ಕಾಂಗ್ರೆಸ್‌ನ ನಾಯಕರಾಗಿರಲಿಲ್ಲ. ಅವರು ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸಿ, ಸರ್ಕಾರದ ವಿರುದ್ಧ ನಿಂತಿದ್ದರು. ತಮ್ಮದೇ ಪಕ್ಷ ಆರಂಭಿಸಿ ಅಲ್ಲಿಂದಲೇ ಸ್ಪರ್ಧಿಸಿದ್ದರು. ಜವಾಹರಲಾಲ್‌ ನೆಹರೂ ಅವರು ಅಂಬೇಡ್ಕರ್ ವಿರುದ್ಧ ಪ್ರಚಾರ ಮಾಡಿ ಸೋಲಿಸಿದ್ದರು. ಈಗ ಕಾಂಗ್ರೆಸ್‌ ನಾಯಕರು ಯಾವ ಮುಖ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಜವಹರಲಾಲ್‌ ನೆಹರೂ ತಮಗೇ ತಾವೇ ಭಾರತ ರತ್ನ ಕೊಟ್ಟುಕೊಂಡರು. ಆದರೆ ಅಂಬೇಡ್ಕರರಿಗೆ ಯಾವುದೇ ಪ್ರಶಸ್ತಿ ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರರ ಜೀವನದ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈಗ ಅಂಬೇಡ್ಕರ್‌ ಫೋಟೋವನ್ನು ಕಾಂಗ್ರೆಸ್ಸಿಗರು ಇಟ್ಟುಕೊಳ್ಳುತ್ತಾರೆ. ಮತ ರಾಜಕಾರಣಕ್ಕಾಗಿ ಅಂಬೇಡ್ಕರ್‌ ಹೆಸರು ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕರು ಕಿಡಿಕಾರಿದರು.

ಬಿ.ವೈ. ವಿಜಯೇಂದ್ರ ಟೀಕೆ:ದೇಶ, ರಾಜ್ಯದಲ್ಲಿರುವುದು ಅಸಲಿ ಕಾಂಗ್ರೆಸ್ ಪಕ್ಷವಲ್ಲ. ಇದು ನಕಲಿ ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ತತ್ವಗಳನ್ನು ಗಾಳಿಗೆ ತೂರಿದ ಪಕ್ಷ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷವು ರಾಜ್ಯದ ಜನರ ಕೋಟಿಗಟ್ಟಲೆ ತೆರಿಗೆ ಹಣವನ್ನು ಬಳಸಿಕೊಂಡು ಬೆಳಗಾವಿಯಲ್ಲಿ ಮಹಾಧಿವೇಶನ ಮಾಡಲು ಹೊರಟಿರುವುದು ಸರಿಯಲ್ಲ. ನಕಲಿ ಕಾಂಗ್ರೆಸ್ಸಿನ ಈ ನೀತಿಯ ವಿರುದ್ಧ ನಾಳೆ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದ್ದೇವೆ. ವಿಧಾನಸಭೆ - ವಿಧಾನ ಪರಿಷತ್ತಿನ ಸದಸ್ಯರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಧಾರೆ ಎರೆದುಕೊಟ್ಟಿದೆ ಕಾಂಗ್ರೆಸ್. ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಅಧಿವೇಶನ ನಿಮಿತ್ತ ಕುಂದಾನಗರಿ ಸುತ್ತಮುತ್ತ ಲೈಟಿಂಗ್ಸ್: ಶತಮಾನದ ಬೆಳಕಿಗೆ ಏನಂತಾರೆ ಬೆಳಗಾವಿ ಜನ?

ಇದನ್ನೂ ಓದಿ:ರಾಹುಲ್​, ಮಲ್ಲಿಕಾರ್ಜುನ ಖರ್ಗೆ ಬೆಳಗಾವಿಗೆ ಆಗಮನ: ಸೆಲ್ಫಿಗೆ ಮುಗಿಬಿದ್ದ ಜನರು

ABOUT THE AUTHOR

...view details