ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರು ಡಿ.31ರಿಂದ ಮುಷ್ಕರ ನಡೆಸಲು ಕರೆ ನೀಡಿದ್ದಾರೆ. ಅಂದು ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಗಳ ಸಂಚಾರ ಅನುಮಾನವಾಗಿದೆ.
ವಿಭಾಗೀಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಹೆಚ್.ಜಿ.ಉಮೇಶ್ ಮಾತನಾಡಿ, "ನೌಕರರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸರ್ಕಾರ ಕೆಎಸ್ಆರ್ಟಿಸಿ ನೌಕರರ ಬೇಡಿಕೆಗಳನ್ನು ಈಡೇರಿಸದೇ ಕಾಲಹರಣ ಮಾಡುತ್ತಿದೆ. ರಾಜ್ಯದ ನಾಲ್ಕು ನಿಗಮದ ಜಂಟಿ ಕ್ರಿಯ ಸಮಿತಿ ಮಾಡಿಕೊಂಡು ಮುಷ್ಕರ ನಡೆಸಲು ತೀರ್ಮಾನಿಸಿದ್ದೇವೆ. ನಮ್ಮ ಹಿಂಬಾಕಿ, ಹೆಚ್ಚುವರಿ ವೇತನ ಮತ್ತು ರಜೆ ವೇತನ ಸೇರಿ ಐದು ಸಾವಿರದ ಹತ್ತು ಕೋಟಿ ಹಣ ನೌಕರಿಗೆ ಬರಬೇಕಿದೆ. ಡಿ.31 ರಿಂದ ನಾಲ್ಕು ನಿಗಮಗಳ ನೌಕರರು ಕೆಲಸವನ್ನು ಬಹಿಷ್ಕರಿಸಿ ಮುಷ್ಕರ ನಡೆಸಲಿದ್ದೇವೆ" ಎಂದು ತಿಳಿಸಿದರು.
ದಾವಣಗೆರೆ ಘಟಕದ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ನ ಅಧ್ಯಕ್ಷ ಮಿರ್ಜಾ ರಹಮತುಲ್ಲ ಮಾತನಾಡಿ, "ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕೆಂಬ ನಿಯಮ ಜಾರಿಯಲ್ಲಿದೆ. 2023ರಲ್ಲಿ ಸರ್ಕಾರ ವೇತನ ಪರಿಷ್ಕರಿಸಿ, ನೌಕರರ ವೇತನವನ್ನು ಹೆಚ್ಚಳ ಮಾಡಿದೆ. 2020 ಮಾರ್ಚ್ 23ರತನಕ ಪರಿಷ್ಕರಣೆ ಮಾಡಿದ ವೇತನವನ್ನು ಇನ್ನೂ ಸಂದಾಯ ಮಾಡಿಲ್ಲ. ಸರ್ಕಾರಕ್ಕೆ ಈ ಬಗ್ಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ" ಎಂದು ಹೇಳಿದರು.
ನೌಕರರ ಬೇಡಿಕೆಗಳೇನು?:
- 01-01-2020ರಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ ನಂತರದ 38 ತಿಂಗಳ ಬಾಕಿ ಹಣವನ್ನು ವಿಳಂಬವಿಲ್ಲದೆ ಪಾವತಿಸಬೇಕು.
- ಶಕ್ತಿ ಯೋಜನೆಯ ಸಂಪೂರ್ಣ ಅನುದಾನವನ್ನು ನಾಲ್ಕು ಸಾರಿಗೆ ನಿಗಮಗಳಿಗೆ ಕೂಡಲೇ ಪಾವತಿಸಬೇಕು.
- ಸದ್ಯ ನೌಕರರು ಪಡೆಯುತ್ತಿರುವ ವಿವಿಧ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡಬೇಕು.
- ವೈದ್ಯಕೀಯ ಸೌಲಭ್ಯ ನೀಡಬೇಕು. ಎಲ್ಲಾ ನೌಕರರಿಗೂ ಪ್ರತೀ ತಿಂಗಳೂ ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ ಎರಡು ಸಾವಿರ ರೂಪಾಯಿ ನೀಡಬೇಕು. ಎಲ್ಲಾ ನೌಕರರಿಗೂ ಉಚಿತ ಔಷಧಿ ನೀಡಬೇಕು. ಇಎಸ್ಐ ಮಾದರಿಯಲ್ಲಿ ನೌಕರರ ಮೂಲ ವೇತನದ ಶೇ.4.5 ಹಾಗೂ ನೌಕರರಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡುವ ಯೋಜನೆ ರೂಪಿಸಬೇಕು. ಈ ಮೇಲ್ಕಂಡ ಸೌಲಭ್ಯಗಳನ್ನು ನಿವೃತ್ತ ನೌಕರರಿಗೆ ಮತ್ತು ಅವರ ಪತಿ/ಪತ್ನಿ ಹಾಗೂ ಮಕ್ಕಳಿಗೆ ನೀಡಬೇಕು.
ಇದನ್ನೂ ಓದಿ: ಎಸ್ಎಸ್ಎಸ್ ಹುಬ್ಬಳ್ಳಿ-ಕನ್ಯಾಕುಮಾರಿ ನಡುವೆ ವಿಶೇಷ ರೈಲು ಸೇವೆ ಆರಂಭ