ಬೆಂಗಳೂರು:ಸೋಮವಾರದಿಂದ ಆರಂಭಗೊಳ್ಳಲಿರುವ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಮಿತ್ರಪಕ್ಷಗಳಾಗಿರುವ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ನಡೆಸಲಿದ್ದು, ನಾಳೆ ಈ ಸಂಬಂಧ ಉಭಯ ಪಕ್ಷಗಳ ನಾಯಕರು ಒಟ್ಟಾಗಿ ಕುಳಿತು ಚರ್ಚಿಸಿ ಹೋರಾಟದ ಸ್ವರೂಪ ಅಂತಿಮಗೊಳಿಸಲಿವೆ.
ಈ ಕುರಿತು ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ನಡೆದ ಬಿಜೆಪಿ ನಾಯಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಅಧಿವೇಶನದಲ್ಲಿ ಜೆಡಿಎಸ್ ಜೊತೆ ಸಮನ್ವಯತೆ ಕುರಿತು ಜೆಡಿಎಸ್ ನಾಯಕರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡಿದ್ದೇವೆ. ನಾಳೆ ಜೆಡಿಎಸ್ ಮತ್ತು ನಾವು ಒಟ್ಟಿಗೆ ಸಭೆ ಮಾಡುತ್ತೇವೆ. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರ ಜೊತೆ ಸಭೆ ಮಾಡುವುದಾಗಿ ಹೇಳಿದ್ದೆವು. ಆದರೆ, ತಾವೇ ಬರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಉಭಯ ಪಕ್ಷಗಳ ನಾಯಕರು ಹೋರಾಟದ ಸ್ವರೂಪ ಮತ್ತು ಸಮನ್ವಯತೆ ಕುರಿತು ನಿರ್ಧರಿಸಲಿದ್ದೇವೆ ಎಂದು ತಿಳಿಸಿದರು.
ಇನ್ನುಳಿದಂತೆ ಇಂದಿನ ಸಭೆಯಲ್ಲಿ ವಿಧಾನಸಭೆ ಅಧಿವೇಶನ ಯಾವ ಅಜೆಂಡಾ ಮೇಲೆ ಮಾತನಾಡಬೇಕು ಅಂತ ಚರ್ಚೆಮಾಡಿದ್ದೇವೆ. ವಾಲ್ಮೀಕಿ ನಿಗಮ, ಮುಡಾ ಹಗರಣ ಪ್ರಕರಣಗಳ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಲಿದ್ದೇವೆ. ಡೆಂಗ್ಯೂ, ಜಿಕಾ ವೈರಸ್ ಹರಡಿದ್ದು, ಸರ್ಕಾರ ಕ್ರಮ ಕೈಗೊಂಡಿಲ್ಲ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಿಲ್ಲ. ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ. ರೈತರ ಬಗ್ಗೆ ಕಾಳಜಿ ಇಲ್ಲ. ಬಿತ್ತನೆ ಬೀಜ ನೀಡಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭದ್ರತೆ ಇಲ್ಲದಾಗಿದೆ. ಬೆಲೆ ಏರಿಕೆ ಕೂಡ ದೊಡ್ಡ ಆಘಾತವಾಗಿದೆ. ಈ ಸರ್ಕಾರ ಪಾಪರ್ ಆಗಿದೆ. ಸರ್ಕಾರ ಮಾಡಿದ ಪಾಪ ಹೆಚ್ಚಾಗಿದೆ. ಶಿಶುಪಾಲನ ರೀತಿ ಇವರಿಗೆ ನೂರು ಚಾನ್ಸ್ ನೀಡಲಾಗಿದೆ. ಜನರಿಗೆ ಹೇಳಿದ್ದೇನು, ಮಾಡಿದ್ದೇನು. ಬೆಲೆ ಏರಿಕೆ ಮಾಡಿ, ಫ್ರೀ ಅಂತಾರೆ. ಬಿಪಿಎಲ್ ಕಾರ್ಡ್ಗೂ ಈಗ ಕೈಹಾಕಿದ್ದಾರೆ. ಇದರಿಂದಲೇ ಈ ಸರ್ಕಾರ ದಿವಾಳಿ ಆಗಿರೋದು ಸ್ಪಷ್ಟವಾಗಿದೆ. ಈ ಕುರಿತೇ ಮೂರು ಗಂಟೆಗಳ ಕಾಲ ಚರ್ಚೆ ಮಾಡಿದ್ದೇವೆ. ವಿಧಾನಸಭೆ ಒಳಗೆ, ಹೊರಗೆ ಹೋರಾಟ ಮಾಡಲಿದ್ದೇವೆ. ಒಂದು ವಾರ ಅಧಿವೇಶನ ಹೆಚ್ಚುವರಿ ಮಾಡಲು ಮನವಿ ಮಾಡಲಿದ್ದೇವೆ. ಇದಕ್ಕೆ ಕಾನೂನಾತ್ಮಕ ಅವಕಾಶವಿದೆ ತಾರ್ಕಿಕ ಅಂತ್ಯದವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದರು.
ಇಡಿ ದಾಳಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ವಾಲ್ಮೀಕಿ ನಿಗಮದ ಹಣ ನುಂಗಿ ನೀರು ಕುಡಿದಿದ್ದಾರೆ. ಈ ಸಂಬಂಧ ಈಗಾಗಲೇ ಆಡಿಯೋ ಬಿಡುಗಡೆ ಆಗಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಹೋಗಿದೆ. ಮುಡಾ ಹಗರಣದಲ್ಲಿ ಯಾವ ಮಂತ್ರಿ ಕೂಡ ಭಾಗಿಯಾಗಿಲ್ಲ ಅಂದರು.