ಕರ್ನಾಟಕ

karnataka

ETV Bharat / state

ಬಿಟ್ ಕಾಯಿನ್ ಹಗರಣ: ಡಿವೈಎಸ್​ಪಿ ಶ್ರೀಧರ್ ಪೂಜಾರ್​ಗೆ ಜಾಮೀನು ನಿರಾಕರಣೆ - Bitcoin Scam

ಬಿಟ್ ಕಾಯಿನ್ ಹಗರಣ ಆರೋಪದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಉಪ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಧರ್‌ ಕೆ.ಪೂಜಾರ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

High Court
ಹೈಕೋರ್ಟ್​ (ETV Bharat)

By ETV Bharat Karnataka Team

Published : Sep 24, 2024, 10:36 AM IST

ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಆರೋಪಿಯಾಗಿರುವ ಡಿವೈಎಸ್ಪಿ ಶ್ರೀಧರ್ ಪೂಜಾರಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ಸೋಮವಾರ ನಿರಾಕರಿಸಿತು. ಶ್ರೀಧರ್‌ ಕೆ. ಪೂಜಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಪ್ರಕಟಿಸಿದ್ದು, ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರ ಪರ ವಕೀಲರು, ಅರ್ಜಿದಾರ ಪೂಜಾರ್‌ ವಿರುದ್ಧ ಪ್ರಕರಣ ದಾಖಲಾಗಿ ಒಂದು ವರ್ಷವಾಗಿದೆ. ಅವರು ಕ್ರಿಮಿನಲ್‌ ಅಲ್ಲ. ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿ. ಕನಿಷ್ಠ ಒಂದು ವಾರದ ಮಟ್ಟಿಗೆ ಮಧ್ಯಂತರ ಜಾಮೀನು ಮುಂದುವರಿಸಬೇಕು ಎಂದು ಕೋರಿದರು.

ಇದಕ್ಕೆ ಸಿಐಡಿ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌, ಸುಪ್ರೀಂ ಕೋರ್ಟ್‌ ಈಚೆಗೆ ನೀಡಿರುವ ತೀರ್ಪಿನಲ್ಲಿ ಜಾಮೀನು ಅರ್ಜಿ ವಜಾಗೊಂಡರೆ ಮಧ್ಯಂತರ ಜಾಮೀನು ರದ್ದಾಗಲಿದೆ. ಅದೇ ಪ್ರಕರಣ ಇಲ್ಲಿ ಅನ್ವಯಿಸಲಿದೆ. ಹೀಗಾಗಿ ಜಾಮೀನು ಮುಂದುವರೆಸಬಾರದು ಎಂದು ಕೋರಿದರು.

ಇದಕ್ಕೆ ಪೀಠ, ಅರ್ಜಿದಾರ ಪೂಜಾರ್‌ ವಿರುದ್ಧ ಕುಖ್ಯಾತ ಕ್ರಿಮಿನಲ್‌ಗಿಂತ ಹೆಚ್ಚಿನ ಆರೋಪಗಳಿವೆ. ಕ್ರಿಮಿನಲ್‌ ವ್ಯವಸ್ಥೆಯೊಳಗೆ ಇರುತ್ತಾನೆ. ಕುಖ್ಯಾತ ಕ್ರಿಮಿನಲ್‌ಗಳನ್ನು ನಿಗ್ರಹಿಸಬಹುದು. ಆದರೆ, ವ್ಯವಸ್ಥೆ ಭಾಗವಾದ ಪೂಜಾರ್‌ ಅವರನ್ನು ನಿಗ್ರಹಿಸಲಾಗದು. ಇದರಲ್ಲಿ ವ್ಯತ್ಯಾಸ ಗುರುತಿಸುವುದು ಅತ್ಯಂತ ಕಷ್ಟ ಎಂದು ತಿಳಿಸಿ ಮನವಿ ತಿರಸ್ಕರಿಸಿತು.

ಪ್ರಕರಣದ ಹಿನ್ನೆಲೆ:ಸಿಸಿಬಿಯಲ್ಲಿ ಮಾದಕ ದ್ರವ್ಯ ವಿರೋಧಿ ಘಟಕದಲ್ಲಿ ಡಿವೈಎಸ್‌ಪಿಯಾಗಿದ್ದ ಶ್ರೀಧರ್‌ ಪೂಜಾರ್‌ಗೆ ಕಸ್ಟಮ್ಸ್‌ ಇಲಾಖೆಯ ಉಪ ಆಯುಕ್ತರಿಂದ ವಿದೇಶಿ ಪೋಸ್ಟ್‌ ಮೂಲಕ ಮಾದಕ ದ್ರವ್ಯ ಆಮದಾಗುವ ಕುರಿತು ಮಾಹಿತಿ ದೊರೆತಿತ್ತು. ಪ್ರಕರಣ ಸಂಬಂಧ ಸುಜಯ್‌ ಎಂಬವರನ್ನು ಬಂಧಿಸಲಾಗಿತ್ತು. ನಂತರ ಆತನನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿ ವಶಕ್ಕೆ ನೀಡಲಾಗಿತ್ತು. ಈ ಸಂಬಂಧ ಪೂಜಾರ್‌ ಅವರು ಕೆಂಪೇಗೌಡ ನಗರ ಠಾಣೆಯಲ್ಲಿ 2020ರ ನವೆಂಬರ್‌ 4ರಂದು ದೂರು ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಹ್ಯಾಕರ್ ಶ್ರೀಕಾಂತ್‌ ಅಲಿಯಾಸ್‌ ಶ್ರೀಕಿಯು ಆರೋಪಿಯಾಗಿದ್ದು, ಕ್ರಿಪ್ಟೊ ಕರೆನ್ಸಿ ವೆಬ್‌ಸೈಟ್‌, ಗೇಮಿಂಗ್‌ ಅಪ್ಲಿಕೇಶನ್‌ಗಳ ಹ್ಯಾಕಿಂಗ್‌ ಬಗ್ಗೆ ಮಾಹಿತಿ ದೊರೆತಿತ್ತು. ಈ ವೇಳೆ ಈತನಿಂದ ಗ್ಯಾಜೆಟ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ನಡುವೆ, ಪ್ರಕರಣದ ತನಿಖಾಧಿಕಾರಿಯಾಗಿ ಪೂಜಾರ್‌ ಸ್ಥಾನಕ್ಕೆ ಪುನೀತ್‌ ಎಂಬುವರನ್ನು ನಿಯೋಜನೆ ಮಾಡಲಾಗಿತ್ತು.

ಇದಾದ ಬಳಿಕ, ಯಶೋಧಾ ದೇವಿ ಎಂಬಾಕೆ ಶ್ರೀಕಿ ಮತ್ತು ಆತನ ಸ್ನೇಹಿತ ರಾಬಿನ್‌ ಖಂಡೇವಾಲಾ ಅವರು ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಪಡೆದ ಹಣ ಮರಳಿಸಿಲ್ಲ ಎಂದು 2020ರ ನವೆಂಬರ್‌ 19ರಂದು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆಯ ಹೊಣೆಯನ್ನು ಶ್ರೀಧರ್‌ ಪೂಜಾರ್‌ಗೆ ವಹಿಸಲಾಗಿತ್ತು. ಇಲ್ಲಿ ರಾಬಿನ್‌ನನ್ನು ಪೂಜಾರ್‌ ಬಂಧಿಸಿ, ಕಸ್ಟಡಿಗೆ ಪಡೆದಿದ್ದರು. ಕ್ರಿಪ್ಟೊ ಕರೆನ್ಸಿ ವೆಬ್‌ಸೈಟ್‌ಗಳು ಮತ್ತು ಗೇಮಿಂಗ್‌ ಅಪ್ಲಿಕೇಶನ್‌ಗಳ ಹ್ಯಾಕಿಂಗ್​ಗಳಲ್ಲಿ ಶ್ರೀಕಿ ಪಾತ್ರ ಖಾತರಿಯಾದ ಹಿನ್ನೆಲೆಯಲ್ಲಿ ಪೂಜಾರ್‌ ಅವರು ಕಾಟನ್‌ ಪೇಠೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 2020ರ ಡಿಸೆಂಬರ್‌ 23ರಂದು ಶ್ರೀಕಿಯ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು, ಅದರ ತನಿಖೆಯನ್ನು ಚಂದ್ರಾಧರ ಅವರಿಗೆ ವಹಿಸಲಾಗಿತ್ತು.

ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್‌ ಅವರು 11 ಆರೋಪಿಗಳನ್ನು ಉಲ್ಲೇಖಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ನಡುವೆ ಪ್ರಕರಣದ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿರಲಿಲ್ಲ. ಈ ಹಂತದಲ್ಲಿ ಕೆಂಪೇಗೌಡ ನಗರ ಠಾಣೆಯ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಎಸ್‌ಐಟಿ ನಡೆಸಿದ್ದ ತನಿಖೆಯಲ್ಲಿ ಅಕ್ರಮವಾಗಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದಾದ ಬಳಿಕ 3-4 ವರ್ಷಗಳ ಬಳಿಕ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 2023ರ ಜುಲೈ 14ರಂದು ಎಸ್‌ಐಟಿ ರಚನೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ಕೆ.ರವಿಶಂಕರ್‌ ಎಂಬವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.

ರವಿಶಂಕರ್‌ ಅವರು ಕೆಂಪೇಗೌಡ ನಗರ ಠಾಣೆಗೆ ಸಂಬಂಧಿಸಿದ ಜಪ್ತಿ ಮಾಡಲಾದ ವಿದ್ಯುನ್ಮಾನ ಸಾಧನಗಳನ್ನು ತಿರುಚಲಾಗಿದೆಯೇ ಎಂದು ಎಫ್‌ಎಸ್‌ಎಲ್‌ನ ನಿರ್ದೇಶಕರಿಂದ ಸ್ಪಷ್ಟನೆ ಕೋರಿದ್ದರು. ಈ ಸಂಬಂಧ ವರದಿ ಆಧರಿಸಿ ಶ್ರೀಧರ್‌ ಪೂಜಾರ್‌ಗೆ 2023ರ ಆಗಸ್ಟ್‌ 8ರಂದು ನೋಟಿಸ್‌ ಜಾರಿ ಮಾಡಲಾಗಿತ್ತು. ಅದರಂತೆ ಆಗಸ್ಟ್‌ 8ರಂದು ಪೂಜಾರ್‌ ತನಿಖೆಯಲ್ಲಿ ಭಾಗಿಯಾಗಿದ್ದರು. ಇದರ ಬೆನ್ನಿಗೇ ಕಾಟನ್‌ ಪೇಟೆ ಠಾಣೆಯಲ್ಲಿ ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಶ್ರೀಧರ್‌ ಪೂಜಾರ್‌ ಸೇರಿದಂತೆ ಇತರೆ ತನಿಖಾಧಿಕಾರಿಗಳ ವಿರುದ್ಧ ಅಕ್ರಮ ನಡೆಸಿರುವ ಆರೋಪ ಸಂಬಂಧ ಪ್ರಕರಣ ದಾಖಲಾಗಿತ್ತು.

ಇದಕ್ಕೆ ಆಕ್ಷೇಪಿಸಿ ಪೂಜಾರ್‌ ಅವರು 2023ರ ಆಗಸ್ಟ್‌ 22ರಂದು ಸಿಐಡಿ ಭಾಗವಾದ ಎಸ್‌ಐಟಿಯ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ತನಿಖಾಧಿಕಾರಿ, ಡಿಜಿಪಿ, ಸಿಐಡಿಯ ಪೊಲೀಸ್‌ ಮಹಾನಿರ್ದೇಶಕರಿಗೆ ಕಾಟನ್‌ ಪೇಟೆ ಠಾಣೆಯಲ್ಲಿ ತಮ್ಮ ವಿರುದ್ಧ ರಾಜಕೀಯ ಪ್ರೇರಿತ, ದುರುದ್ದೇಶಿತ ಪ್ರಕರಣವಾಗಿದೆ ಎಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದನೆ ದೊರೆಯ ಹಿನ್ನೆಲೆಯಲ್ಲಿ ಪೂಜಾರ್‌ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು 2023ರ ಸೆಪ್ಟಂಬರ್‌ 12ರಂದು ಮಧ್ಯಂತರ ಜಾಮೀನು ನೀಡಿತ್ತು.

ಈ ಮಧ್ಯೆ, ಪೂಜಾರ್‌ ಸೇರಿ ಇತರೆ ಅಧಿಕಾರಿಗಳ ವಿರುದ್ಧ ಮೇಲಿನ ಆರೋಪಗಳನ್ನೇ ಉಲ್ಲೇಖಿಸಿ ಕೆಂಪೇಗೌಡ ನಗರ, ಅಶೋಕ ನಗರ ಮತ್ತು ಕಾಟನ್‌ ಪೇಟೆ ಠಾಣೆಗಳಲ್ಲಿನ ಪ್ರಕರಣಗಳ ತನಿಖೆಯ ವೇಳೆ ಅಕ್ರಮ ನಡೆಸಲಾಗಿದೆ ಎಂದು ಸಿಐಡಿ ಸೈಬರ್‌ ಠಾಣೆಯಲ್ಲಿ ತನಿಖಾಧಿಕಾರಿ ರವಿಶಂಕರ್‌ ಮತ್ತೊಂದು ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಇಬ್ಬರು ಆರೋಪಿಗಳನ್ನು ಪೂಜಾರ್‌ ಮತ್ತು ಇತರರು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದರು. ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿಯೊಬ್ಬನಿಗೆ ಇಮೇಲ್‌ ಬಳಕೆ ಅವಕಾಶ ಮಾಡಿಕೊಡಲಾಗಿತ್ತು ಎಂದು ಆರೋಪ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೂಜಾರ್‌ ನಿರೀಕ್ಷಣಾ ಜಾಮೀನು ಕೋರಿದ್ದರು.

ABOUT THE AUTHOR

...view details