ಆರೋಗ್ಯ ಸಚಿವ ದಿನೇಶ್ ಗಂಡೂರಾವ್ ಬೆಂಗಳೂರು : ಹುಕ್ಕಾ ಬಾರ್ಗಳನ್ನು ನಿಷೇಧಿಸುವ ಹಾಗೂ ಸಿಗರೇಟು ಸೇದುವ ವಯೋಮಿತಿಯನ್ನು 21 ವರ್ಷಕ್ಕೆ ಏರಿಸುವ 2024ನೇ ಸಾಲಿನ ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) (ಕರ್ನಾಟಕ ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.
ವಿಧಾನಸಭೆಯಲ್ಲಿ ಈ ಮುಂಚೆ 18 ವರ್ಷದೊಳಗಿನವರಿಗೆ ಸಿಗರೇಟ್ ಮಾರಬಾರದು ಅಂತಿತ್ತು. ಅದನ್ನು 21 ವರ್ಷಕ್ಕೆ ಅಂತ ಏರಿಸಲಾಗಿದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದಿದರೆ 1 ಸಾವಿರ ದಂಡ ವಿಧಿಸುವ ನಿಯಮ ರೂಪಿಸಲಾಗಿದ್ದು, ಹುಕ್ಕಾಬಾರ್‌ಗಳನ್ನು ನಿಷೇಧ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಬಾರದು ಅಂತಿದೆ. ಆದರೆ ಅನೇಕ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಹುಕ್ಕಾ ಬಾರ್ ಆರಂಭಿಸಿದ್ದಾರೆ. ಸಿಗರೇಟ್ ಸೇದೋದೆ ತಪ್ಪು ಅಂತ ಹೇಳಿದ್ರೆ, ಮತ್ತೊಂದು ರೂಪದಲ್ಲಿ ತಂದಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗಂಡೂರಾವ್ ಅವರು ತಿಳಿಸಿದರು.
ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ: ಶಾಲಾ ಕಾಲೇಜುಗಳ ಮೂರು ಮೀಟರ್ ಒಳಗೆ ಮಾರಾಟ ಮಾಡಬಾರದು ಅಂತ ನಿಯಮ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರಿಗೆ ಇನ್ನೂರು ರೂ. ದಂಡ ಇತ್ತು. ಈಗ ಸಿಗರೇಟ್ ಸೇದುವವರಿಗೆ 1000 ರೂ. ದಂಡ ಹಾಕಲಾಗುವುದು. ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ. ಯುವಕರು ಹುಕ್ಕಾ ಬಾರ್‌ಗೆ ಹೋಗಿ ಅಡಿಕ್ಟ್ ಆಗ್ತಿದ್ದಾರೆ. ಯುವಕರು ಇದನ್ನ ಫ್ಯಾಷನ್ ಮಾಡಿಕೊಂಡಿದ್ದಾರೆ. ಇದರಿಂದ ಬೇರೆ ರೀತಿಯ ಅಡ್ಡ ಪರಿಣಾಮ ಆಗ್ತಿದೆ. ನಾವು ಈಗಾಗಲೇ ನೋಟಿಫಿಕೇಷನ್ ನೀಡಿದ್ದೇವೆ. ಅದಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಅವರಿಗೆ ಸ್ಟೇ ನೀಡಿಲ್ಲ ಎಂದರು.
ಆರೋಗ್ಯ ಸಚಿವ ದಿನೇಶ್ ಗಂಡೂರಾವ್ ಹುಕ್ಕಾ ಬಾರ್ ನಡೆಸುವವರು ಶ್ರೀಮಂತರು : ವಿಧೇಯಕವನ್ನು ಸ್ವಾಗತಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಇದಕ್ಕೆ ಇನ್ನೆರಡು ನಿಯಮ ಸೇರಿಸಿ. ಶಾಲಾ ಕಾಲೇಜುಗಳ ನೂರು ಮೀಟರ್ ಒಳಗೆ ಮಾರಾಟ ಮಾಡಿದ್ರೆ ಸಾವಿರ ಅಲ್ಲ, ಹತ್ತು ಸಾವಿರ ದಂಡ ಹಾಕಿ ಅಂತ ಮನವಿ ಮಾಡಿದರು. ಸಿಗರೇಟ್ ಮಾರಾಟ ಮಾಡುವವರು ಸಣ್ಣ ಪುಟ್ಟ ಅಂಗಡಿಯವರು. ಅವರಿಗೆ ಹರಾಸ್‌ಮೆಂಟ್ ಮಾಡಬಾರದು. ಹಾಗಾಗಿ ಸಾವಿರ ರೂಪಾಯಿ ದಂಡ ಹಾಕಿದ್ದೇವೆ. ಆದ್ರೆ ಹುಕ್ಕಾ ಬಾರ್ ನಡೆಸುವವರು ಶ್ರೀಮಂತರು. ಅವರಿಗೆ ಬೇಕಾದ್ರೆ ನೋಡೋಣ ಎಂದು ಭರವಸೆ ನೀಡಿದರು.
ಇದನ್ನೂ ಓದಿ :ವಿಧಾನಸಭೆಯಲ್ಲಿ ಚರ್ಚೆಗೆ ಕಾರಣವಾದ ನಾಡಗೀತೆ ಸುತ್ತೋಲೆ; ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಭರವಸೆ