ಬೆಂಗಳೂರು:ರಾಜ್ಯ ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರ ವರ್ಗಾವಣೆ ಕುರಿತು ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಬೇಸರ ವ್ಯಕ್ತಪಡಿಸಿದ್ದಾರೆ. ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಶುಕ್ರವಾರ ಆದೇಶಿಸಿರುವ ರಾಜ್ಯ ಸರ್ಕಾರ, ಅಲೋಕ್ ಕುಮಾರ್ ಅವರ ಹುದ್ದೆಗೆ ಕೆ.ವಿ. ಶರತ್ ಚಂದ್ರ ಅವರನ್ನು ನೇಮಿಸಿದೆ.
ಆದೇಶದ ಕುರಿತು ಎಕ್ಸ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಭಾಸ್ಕರ್ ರಾವ್, ''ಎಲ್ಲ ಪೊಲೀಸ್ ಅಧಿಕಾರಿಗಳು ಸಂಚಾರ ವಿಭಾಗದಲ್ಲಿ ಕೆಲಸ ಮಾಡಲು ಇಷ್ಟಪಡುವುದಿಲ್ಲ, ಬದಲಿಯಾಗಿ ಕಾನೂನು ಮತ್ತು ಸುವ್ಯವಸ್ಥೆ ಬಯಸುತ್ತಾರೆ. ಆದರೆ, ಅಲೋಕ್ ಕುಮಾರ್ ಅವರು ರಸ್ತೆ ಸುರಕ್ಷಿತಾ ವಿಭಾಗದಲ್ಲಿ ಹೃದಯಪೂರ್ವಕವಾಗಿ ಕೆಲಸ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಿದರು. ಕೆಲವು ಕಠಿಣ ನಿಯಮಗಳ ಜಾರಿಯ ಮೂಲಕ ರಸ್ತೆಗಳಲ್ಲಿ ಅಪಘಾತದ ಪ್ರಮಾಣ, ಸಾವು ನೋವುಗಳ ಸಂಖ್ಯೆಗಳನ್ನು ಕಡಿಮೆಯಾಗುವಂತೆ ಮಾಡಿದರು. ಅವರನ್ನು ಅನೌಪಚಾರಿಕವಾಗಿ ಸ್ಥಳಾಂತರಿಸಲಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಬಗ್ಗೆ ಆಡಳಿತ ವರ್ಗ ಯಾವಾಗಲೂ ಅಸೂಯೆಪಡುತ್ತದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.