ಕಾರವಾರ (ಉತ್ತರ ಕನ್ನಡ) :ಅಂಕೋಲಾ, ಶಿರೂರು ಗುಡ್ಡ ಕುಸಿತದಂತಹ ಘಟನೆಗಳು ಮತ್ತೆ ಸಂಭವಿಸದಂತೆ ತಡೆಯಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜಕೀಯ ಬಿಟ್ಟು ಎಲ್ಲ ಪಕ್ಷದವರನ್ನೊಳಗೊಂಡ ನಿಯೋಗವನ್ನು ಪ್ರಧಾನಿ ಹಾಗೂ ಕೇಂದ್ರ ಭೂ ಸಾರಿಗೆ ಸಚಿವರ ಬಳಿ ಕೊಂಡೊಯ್ದು ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ್ ಪಟಗಾರ ಒತ್ತಾಯಿಸಿದರು.
ಅಂಕೋಲಾ, ಶಿರೂರು ಬಳಿ ದುರ್ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಗುತ್ತಿಗೆ ಕಂಪನಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ನಿರ್ಲಕ್ಷ್ಯವೇ ಕಾರಣ. ಈ ಹಿಂದೆಯೂ ಇಂತಹ ಹಲವು ದುರ್ಘಟನೆಗಳು ನಡೆದು ಸಾವು ನೋವುಗಳು ಸಂಭವಿಸಿದ್ದರೂ ಐಆರ್‌ಬಿ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಹೇಳಿದರು.
ಐಆರ್‌ಬಿ ಕಂಪನಿ ಸಾವಿರಾರು ಕೋಟಿ ಮೊತ್ತದ ನಮ್ಮ ಕಲ್ಲು ಮಣ್ಣುಗಳನ್ನು ಬಳಸಿಕೊಂಡಿದೆ. ಅಲ್ಲದೇ ಹೆದ್ದಾರಿ ಅರೆಬರೆಯಾಗಿದ್ದರೂ ಕೂಡ ಟೋಲ್ ಸಂಗ್ರಹವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಇದೀಗ ಇಷ್ಟೊಂದು ದೊಡ್ಡ ದುರ್ಘಟನೆಯಾಗಿದ್ದರೂ ಮೃತರಿಗೆ ಒಂದು ರೂ. ಪರಿಹಾರ ನೀಡಿಲ್ಲ. ಆದರೆ, ಇದೆಲ್ಲವೂ ಐಆರ್‌ಬಿ ಕಂಪನಿ ಅವೈಜ್ಞಾನಿಕ ಕಾಮಗಾರಿಯಿಂದಲೇ ನಡೆದಿರುವುದರಿಂದ ಮೃತರಿಗೆ ಐಆರ್‌ಬಿ ಕಂಪನಿಯೇ ಪರಿಹಾರ ನೀಡಬೇಕು. ಹಾನಿಗೊಳಗಾದ ಮನೆಗಳನ್ನು ಕಂಪೆನಿಯೇ ಕಟ್ಟಿಸಿಕೊಡುವಂತೆ ಮಾಡಬೇಕು ಎಂದರು.