ಬೆಂಗಳೂರು: ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಯೋಜನೆಯಡಿ ಪರಿಚಯಿಸಿರುವ ಭಾರತ್ ಅಕ್ಕಿ ಮಾರುಕಟ್ಟೆಯಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಗೆ ಲಭ್ಯವಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಡಿ ದಿನನಿತ್ಯ ಬೇಕಾಗುವ ಆಹಾರ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.
ಈ ಮೊದಲು ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಕಡ್ಲೆಬೇಳೆ ಕೆ.ಜಿಗೆ 60 ರೂ, ಗೋಧಿ ಹಿಟ್ಟು 27.50 ರೂ ಹಾಗೂ ಮೂಂಗ್ ದಾಲ್ ಪ್ರತಿ ಕೆ.ಜಿಗೆ 93 ರೂ.ಯಂತೆ ವಿತರಣೆ ಮಾಡಲಾಗುತ್ತಿತ್ತು. ಇದರ ಮುಂದುವರೆದ ಭಾಗವಾಗಿ ಅಕ್ಕಿಯನ್ನು ಪ್ರತಿ ಕೆ.ಜಿಗೆ 29 ರೂ.ಯಂತೆ ಸರಬರಾಜು ಮಾಡಲಾಗುತ್ತಿದೆ. ಈ ಅಕ್ಕಿ 5 ಮತ್ತು 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ಲಭ್ಯ.
ಆನ್ಲೈನ್ನಲ್ಲೂ ಖರೀದಿಗೆ ಅವಕಾಶ:ಬೆಂಗಳೂರಿನ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್.ಸಿ.ಸಿ.ಎಫ್) ಮೂಲಕ ಮಾರಾಟ ಮಾಡಲಾಗುತ್ತಿರುವ ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ರಿಲಯನ್ಸ್, ಮೋರ್, ಡಿ ಮಾರ್ಟ್ ಮುಂತಾದ ರಿಟೇಲ್ ಅಂಗಡಿಗಲ್ಲಷ್ಟೇ ಅಲ್ಲದೆ ಅಮೇಜಾನ್, ಫ್ಲಿಪ್ಕಾರ್ಟ್ನಂತಹ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲೂ ಖರೀದಿಸಬಹುದು. ಇನ್ನೊಂದು ವಾರದಲ್ಲಿ ಇತರ ಸ್ಟೋರ್‌ಗಳಲ್ಲೂ ಅಕ್ಕಿ ಲಭ್ಯವಾಗಲಿದೆ.
ಯಶವಂತಪುರದಲ್ಲಿ ಮುಖ್ಯ ದಾಸ್ತಾನು ಕೇಂದ್ರ:ಬೆಂಗಳೂರಿನ ಎನ್.ಸಿ.ಸಿ.ಎಫ್ ಮುಖ್ಯ ದಾಸ್ತಾನು ಕೇಂದ್ರ ಯಶವಂತಪುರದಲ್ಲಿದ್ದು ಅಲ್ಲಿಂದ ನಗರದ 50 ಬಡಾವಣೆಗಳಿಗೆ ಮೊಬೈಲ್ ವ್ಯಾನ್ ಮೂಲಕ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಬಸವೇಶ್ವರ ನಗರ, ದೀಪಾಂಜಲಿ ನಗರ, ಮಹಾಲಕ್ಷ್ಮೀ ಲೇಔಟ್, ಗಾಯತ್ರಿ ನಗರ, ನಾಗಸಂದ್ರ, ಅಬ್ಬಿಗೆರೆ, ಚಿಕ್ಕಬಾಣಾವರ, ಥಣಿಸಂದ್ರ, ಹೆಸರಘಟ್ಟ, ಯಲಹಂಕ, ಮಾಗಡಿ ರೋಡ್, ಕೊಡಿಗೆಹಳ್ಳಿ, ಶೇಷಾದ್ರಿಪುರ, ಸಂಜಯ್ ನಗರ, ಜಕ್ಕೂರು, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಜೆ.ಸಿ.ನಗರ, ಡೈರಿ ಸರ್ಕಲ್, ಕೊಡಿಗೆಹಳ್ಳಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ಅಕ್ಕಿ ಪೂರೈಸಲಾಗುತ್ತದೆ.
ಅಕ್ಕಿ ವಿತರಣೆಗೆ ಚಾಲನೆ ನೀಡಿದ್ದ ಯಡಿಯೂರಪ್ಪ:ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ ವಿತರಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಈ ವೇಳೆ ಮಾತನಾಡಿದ್ದ ಅವರು, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಡಿ ಒಂದೇ ಬ್ರ್ಯಾಂಡಿನಡಿಯಲ್ಲಿ ದಿನನಿತ್ಯ ಬೇಕಾಗುವ ಆಹಾರ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಈವರೆಗೆ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಪ್ರತಿ ಕೆಜಿ ಕಡ್ಲೆಬೇಳೆ, ಗೋಧಿ ಹಿಟ್ಟು ಹಾಗೂ ಹೆಸರು ಬೇಳೆ ವಿತರಣೆ ಮಾಡಲಾಗುತ್ತಿತ್ತು. ಈ ಯೋಜನೆಯ ಮುಂದುವರೆದ ಭಾಗವಾಗಿ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 29 ರೂ.ಗಳಂತೆ ಸರಬರಾಜು ಮಾಡಲು ಹಸಿರು ನಿಶಾನೆ ತೋರಿಸಲಾಗಿದೆ ಎಂದಿದ್ದರು.
ಚುನಾವಣಾ ಪೂರ್ವದಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಒದಗಿಸುತ್ತೇವೆಂದು ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ನಂತರ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆ.ಜಿ ಅಕ್ಕಿ ಹೊರತುಪಡಿಸಿ ಒಂದು ಗ್ರಾಂನಷ್ಟು ಅಕ್ಕಿಯನ್ನೂ ಹೆಚ್ಚುವರಿಯಾಗಿ ಒದಗಿಸಲು ಆಗಿಲ್ಲ. ಆದರೆ ನಮ್ಮ ಕೇಂದ್ರ ಸರ್ಕಾರ ಬರೀ ಬಾಯಿ ಮಾತಿನಲ್ಲಿ ಭರವಸೆ ನೀಡದೆ, ಕಾಲಹರಣ ಮಾಡದೆ ಇಂದು ಪ್ರತಿ ಕೆಜಿಗೆ 27 ರೂ. ಮಾತ್ರ ಪಡೆದು ಎಲ್ಲರಿಗೂ ಅಕ್ಕಿಯನ್ನು ವಿತರಿಸಲು ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ:ಇಂದು ಸಲ್ಲಿಕೆಯಾದ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡಬೇಕು: ಸಿಎಂ ಸಿದ್ದರಾಮಯ್ಯ