ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದ ಅತಿ ಮುಖ್ಯ ಅಂಗವಾಗಿರುವ ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಕೇಂದ್ರೀಯ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಲಾಗಿದೆ. 1 ಕೋಟಿ ರೂಪಾಯಿ ಅನುದಾನದಲ್ಲಿ ಗ್ರಂಥಾಲಯ ಹೊಸ ಸ್ಪರ್ಶ ಪಡೆದುಕೊಂಡಿದ್ದು, ಗ್ರಂಥಾಲಯದ ಸುತ್ತಲೂ 10 ಎಕರೆ ವ್ತಾಪ್ತಿಯಲ್ಲಿ 28 ಸಾವಿರ ಮಿಯಾವಾಕಿ ಗಿಡಗಳನ್ನು ನೆಟ್ಟು ಹಸಿರು ಗ್ರಂಥಾಲಯವನ್ನಾಗಿ ಮಾಡಲಾಗಿದೆ. ಸಾಂಪ್ರದಾಯಿಕ ಗಿಡ, ಮರಗಳನ್ನು ನೆಡುವ ಮೂಲಕ ಸಂಪೂರ್ಣ ಗ್ರಂಥಾಲಯವನ್ನು ಹಸಿರುಮಯ ಮಾಡಲಾಗಿದೆ.
ವಿದ್ಯಾರ್ಥಿಗಳು ಒತ್ತಡಮುಕ್ತರಾಗಿ ಅಧ್ಯಯನ ನಡೆಸಲು ವಿಶೇಷವಾಗಿ ಆಲದಮರದಲ್ಲಿ ಹ್ಯಾಂಗಿಂಗ್ ಲೈಬ್ರರಿ ನಿರ್ಮಿಸಲಾಗಿದೆ. ಪ್ರತಿ ಮರದಲ್ಲೂ ವಿದ್ಯಾರ್ಥಿಗಳು ಯಾವುದೇ ಅಡಚಣೆಗಳಿಲ್ಲದೇ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ ಗ್ರಂಥಾಲಯವನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸಲು ಆದ್ಯತೆ ನೀಡಲಾಗಿದೆ. ಗ್ರಂಥಾಲಯ ವ್ಯಾಪ್ತಿಯಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸಲಾಗಿದೆ. ವಿದ್ಯಾರ್ಥಿ ಮತ್ತು ಶಿಕ್ಷಕರ ಲಾಂಜ್ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳ ಮನೋಒತ್ತಡ ಕಡಿಮೆ ಮಾಡಲು ಮತ್ತು ಓದಿನ ನಡುವೆ ಮನೋವಿಕಾಸ ಹೆಚ್ಚಿಸಲು ಕ್ರೀಡಾ ವಲಯ, ಸಂಗೀತ ವಲಯ ನಿರ್ಮಿಸಲಾಗಿದೆ. ಚೆಸ್, ಕೇರಂ ನಂತಹ ಸಣ್ಣ ಪುಟ್ಟ ಆಟಗಳು, ಸಂಗೀತ ಆಲಿಸುವುದರ ಮೂಲಕ ಮನಸ್ಸಿಗೆ ವಿಶ್ರಾಂತಿ ನೀಡುವ ಪ್ರಯತ್ನವನ್ನು ಗ್ರಂಥಾಲಯ ವಿಭಾಗ ಮಾಡುತ್ತಿದೆ. ಈ ಜಾಗದಲ್ಲಿ ಬಯಲು ರಂಗಮಂದಿರ ಕೂಡ ತೆಲೆ ಎತ್ತಲ್ಲಿದ್ದು, ಶಿಕ್ಷಣಕ್ಕೆ ಸಾಥ್ ನೀಡುವ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಲಿದೆ. ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ ಅಭಿವೃದ್ಧಿಗೆ ಗ್ರಂಥಪಾಲಕ ಡಾ ಬಿ ಆರ್ ರಾಧಾಕೃಷ್ಣ ಕಾಯಕಲ್ಪ ನೀಡಿದ್ದಾರೆ. ಕುಲಪತಿ ಡಾ ಜಯಕರ ಎಸ್ ಎಂ, ಕುಲಸಚಿವ ಶೇಕ್ ಲತೀಫ್ ಸಹಕಾರದಿಂದ 2023-24ನೇ ಸಾಲಿನಲ್ಲಿ ಗ್ರಂಥಾಲಯ ಹೊಸ ರೂಪ ಪಡೆದುಕೊಂಡಿದೆ.