ಬೆಂಗಳೂರು: ಸಂಶೋಧನೆ ಮತ್ತು ಅಧ್ಯಯನವನ್ನು ಮತ್ತಷ್ಟು ಉತ್ತೇಜಿಸಲು ಬೆಂಗಳೂರು ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆ ಇಟ್ಟಿದ್ದು, ವಿವಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕೋಶವನ್ನು ಸ್ಥಾಪಿಸಿದೆ. ಈ ಸಂಬಂಧ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಜೊತೆ ಪರಸ್ಪರ ಒಡಂಬಡಿಕೆಗೆ ಕೂಡ ಸಹಿ ಹಾಕಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯ ತಂತ್ರಜ್ಞಾನ, ವಿಜ್ಞಾನ, ಭೂಗೋಳ, ಸಮಾಜ ವಿಜ್ಞಾನ, ವಾಣಿಜ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಿದ್ದು, ಅನೇಕ ಸಂಶೋಧಕರು ತಮ್ಮ ಆವಿಷ್ಕಾರಗಳ ಆಲೋಚನೆಗಳಿಗೆ ಪೇಟೆಂಟ್‌ಗಳನ್ನು ಪಡೆದುಕೊಂಡಿದ್ದಾರೆ. ಅಂದಾಜು 70ಕ್ಕೂ ಅಧಿಕ ಪೇಟೆಂಟ್‌ಗಳು ಕಳೆದ 5 ವರ್ಷಗಳಲ್ಲಿ ದಾಖಲಾಗಿದ್ದು, ಈ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಬೆಂಗಳೂರು ವಿಶ್ವವಿದ್ಯಾಲಯ ಹೊಂದಿದೆ.
"ಬೌದ್ಧಿಕ ಆಸ್ತಿಯ ಹಕ್ಕು ಕೋಶದಡಿಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಂಶೋಧಕರು, ಪ್ರಾಧ್ಯಾಪಕರಿಗೆ ತಮ್ಮ ಆವಿಷ್ಕಾರ ಸಂಶೋಧನೆಗಳನ್ನು ರಕ್ಷಿಸುವ ಕುರಿತು ಮಾರ್ಗದರ್ಶನ ನೀಡಲಾಗುವುದು. ಹೊಸ ಆವಿಷ್ಕಾರ, ಸಂಶೋಧನೆಗೆ ಐಪಿಆರ್ ಕೋಶದ ವತಿಯಿಂದ ಪೇಟೆಂಟ್, ಕಾಪಿರೈಟ್, ಟ್ರೇಡ್ ಸಿಕ್ರೆಟ್ಸ್, ಟ್ರೇಡ್ಮಾರ್ಕ್ ಪಡೆಯಲು ಸಹಕರಿಸಲಾಗುವುದು. ಸರ್ಕಾರಿ ನವೀಕರಣ ಶುಲ್ಕವನ್ನು ಕೋಶದ ವತಿಯಿಂದಲೇ ಭರಿಸಲಾಗುವುದು. ಅಲ್ಲದೇ ಕೋಶದ ವತಿಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಹೊಸ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಅವಶ್ಯಕವಾದ ಸೂಕ್ತ ಅವಕಾಶ ಮತ್ತು ವೇದಿಕೆ ಕಲ್ಪಿಸಲಾಗುವುದು" ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ್ ಹೇಳಿದರು.